×
Ad

ಇನ್ನಾದರೂ ವಿಶ್ರಾಂತಿ ತೆಗೆದುಕೊಳ್ಳಿ: 'ಕೊರೋನ' ಕರ್ತವ್ಯದಲ್ಲಿರುವ ತುಂಬು ಗರ್ಭಿಣಿ ನರ್ಸ್ ಗೆ ಬಿಎಸ್‌ವೈ ಸಲಹೆ

Update: 2020-05-10 20:33 IST

ಬೆಂಗಳೂರು, ಮೇ 10: 'ಕೊರೋನ ವೈರಸ್ ಸೋಂಕು ತಡೆಗಟ್ಟಲು ನೀವು ಹಾಕುತ್ತಿರುವ ಶ್ರಮವನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ನಾನು ಪ್ರತಿನಿಧಿಸುವ ಜಿಲ್ಲೆಯವರಾಗಿ ನೀವು ಇಷ್ಟೊಂದು ಶ್ರಮ ವಹಿಸುತ್ತಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ವಿಶ್ರಾಂತಿಯನ್ನು ತೆಗೆದುಕೊಕೊಳ್ಳಿ' ಎಂದು  ಮುಖ್ಯಮಂತ್ರಿ ಯಡಿಯೂರಪ್ಪನವರು, ನರ್ಸ್ ವೊಬ್ಬರಿಗೆ ಕರೆ ಮಾಡಿ ಸಲಹೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ರೂಪಾ ಅವರು ಮುಖ್ಯಮಂತ್ರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದರೂ, ರಜೆ ತೆಗೆದುಕೊಳ್ಳದೆ ಕೊರೋನ ಸೋಂಕು ತಡೆಯುವ ಕಾರ್ಯದಲ್ಲಿ ತೊಡಗಿ ಕರ್ತವ್ಯಕ್ಕೆ ಪ್ರತಿನಿತ್ಯ ಹಾಜರಾಗುತ್ತಿರುವುದು ಸಿಎಂ ಸೇರಿದಂತೆ ಹಲವರ ಪ್ರಶಂಸೆಗೆ ಕಾರಣವಾಗಿದೆ.

ಜಿಲ್ಲೆಯ ಗಾಜನೂರು ಗ್ರಾಮದಿಂದ 60 ಕಿ.ಮೀ ದೂರದಲ್ಲಿವ ತೀರ್ಥಹಳ್ಳಿಗೆ ಬಸ್‍ನಲ್ಲಿಯೇ ಪ್ರಯಾಣಿಸಿ ನರ್ಸ್ ರೂಪಾ, ಕೆಲಸಕ್ಕೆ ಹಾಜರಾಗುತ್ತಿದ್ದು, ತುಂಬು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿ.ಮೀ ಪ್ರಯಾಣ ಮಾಡುತ್ತಾರೆ. 

ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ರೂಪಾ ಅವರು, ದೂರವಾಣಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಧ್ವನಿಕೇಳಿ ಕ್ಷಣಕಾಲ ವಿಚಲಿತರಾದರು. ಈ ವೇಳೆ ರೂಪಾ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, 'ಮುಂದೆ ಏನು ಮಾಡಬೇಕು, ಅದನ್ನು ನೋಡೋಣ. ಈಗ ನೀವು ವಿಶ್ರಾಂತಿ ಪಡೆಯಿರಿ' ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News