×
Ad

ರಾಜ್ಯದಲ್ಲಿ 848 ಕೊರೋನ ಸೋಂಕಿತರ ಪೈಕಿ ಶೇ.76ರಷ್ಟು ಮಂದಿಗೆ ರೋಗ ಲಕ್ಷಣಗಳೇ ಇಲ್ಲ !

Update: 2020-05-10 20:51 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 10: ರಾಜ್ಯದಲ್ಲಿ ಕೊರೋನ ಸೋಂಕು ಗುಪ್ತಗಾಮಿನಿಯಂತೆ ಪ್ರವಹಿಸುತ್ತಿರುವಂತಿದೆ. ಇದಕ್ಕೆ ಸಾಕ್ಷಿಯಾಗಿ ಲಕ್ಷಣ ರಹಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿವೆ. ರೋಗ ಲಕ್ಷಣಗಳೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಇದು ವೈದ್ಯಕೀಯ ಮತ್ತು ಆಡಳಿತ ಸಿಬ್ಬಂದಿಗೆ ದೊಡ್ಡ ತಲೆನೋವು ತಂದಿದೆ.

ನೆಗಡಿ, ಕೆಮ್ಮು, ಜ್ವರ ಇವು ಕೊರೋನ ವೈರಸ್ ಸೋಂಕಿನ ಪ್ರಮುಖ ರೋಗ ಲಕ್ಷಣಗಳಾಗಿವೆ. ಸೋಂಕು ತಗುಲಿದ 2ರಿಂದ 15 ದಿನಗಳಲ್ಲಿ ಈ ರೋಗ ಲಕ್ಷಣಗಳು ವ್ಯಕ್ತವಾಗುವ ನಿರೀಕ್ಷೆ ಇರುತ್ತದೆ. ಕೆಲವರಲ್ಲಿ ಇದು 30 ದಿನಗಳ ಮೇಲಾದರೂ ಕಾಣಿಸುವುದೇ ಇಲ್ಲ. ಹಾಗಾಗಿ ರೋಗ ಪತ್ತೆಯ ಕಾರ್ಯದಲ್ಲಿ ಇದು ಬಹಳ ತೊಡಕಾದ ವಿಷಯವಾಗಿದೆ.

ರಾಜ್ಯದಲ್ಲಿ ಇದುವರೆಗೂ 848 ಕೊರೋನ ಸೋಂಕಿತರು ಪತ್ತೆಯಾಗಿದ್ಧಾರೆ. ಅವರಲ್ಲಿ ರೋಗ ಲಕ್ಷಣಗಳಿರುವ ವ್ಯಕ್ತಿಗಳು 202 ಮಾತ್ರ. ಇನ್ನುಳಿದ ಸುಮಾರು 646 ಮಂದಿಗೆ ಯಾವುದೇ ರೋಗ ಲಕ್ಷಣಗಳೇ ಇಲ್ಲ. ಎಲ್ಲಾ ಆರೋಗ್ಯವಂತ ವ್ಯಕ್ತಿಗಳಂತೆ ಇವರೂ ಇದ್ದಾರೆ. ಅಂದರೆ, ಶೇ. 76ರಷ್ಟು ಸೋಂಕಿತರು ಯಾವ ರೋಗ ಲಕ್ಷಣಗಳಿಲ್ಲದೆ ಸಹಜವಾಗಿಯೇ ಇದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆ ಮಾಡಬಹುದು. ಆದರೆ, ರೋಗ ಲಕ್ಷಣಗಳೇ ಇಲ್ಲದ ವ್ಯಕ್ತಿಗಳನ್ನು ಹೇಗೆ ಗುರುತಿಸಲು ಸಾಧ್ಯ ಎಂಬುವುದೇ ಸವಾಲಿನ ವಿಷಯ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದವರಲ್ಲಿ ಹೆಚ್ಚಿನವರಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ. ಇವರನ್ನು ಪರೀಕ್ಷೆಗೆ ಒಳಪಡಿಸದೇ ಇದ್ದಿದ್ದರೆ ಇವರ ರೋಗ ಬೆಳಕಿಗೆ ಬರುತ್ತಿರಲಿಲ್ಲ. ಇವರಿಂದ ಇನ್ನೂ ಅದೆಷ್ಟೋ ಮಂದಿಗೆ ಸೋಂಕು ಪ್ರವಹಿಸುವ ಸಾಧ್ಯತೆ ಇರುತ್ತಿತ್ತು. ರಾಜ್ಯಾದ್ಯಂತ ಹೀಗೆ ಗುಪ್ತಗಾಮಿನಿಯಾಗಿ ಅದೆಷ್ಟು ಸೋಂಕಿನ ಅಲೆಗಳು ಎದ್ದಿದೆಯೋ ಗೊತ್ತಿಲ್ಲ. ಪರೀಕ್ಷೆಗಳ ಪ್ರಮಾಣ ಹೆಚ್ಚಾದರೆ ವಾಸ್ತವ ಸಂಗತಿ ಬೆಳಕಿಗೆ ಬರುತ್ತದೆ ಎಂಬುದು ತಜ್ಞರ ಅಭಿಮತ.

ರ‍್ಯಾಪಿಡ್ ಟೆಸ್ಟ್: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ರ‍್ಯಾಪಿಡ್ ಟೆಸ್ಟ್ ಶುರುವಾದರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಊಹೆಗೂ ನಿಲುಕದಷ್ಟು ಹೆಚ್ಚಾಗಲಿದೆ. ಕರ್ನಾಟಕದ 7 ಕೋಟಿ ಜನರ ಪೈಕಿ ಈವರೆಗೆ ರ‍್ಯಾಪಿಡ್ ಟೆಸ್ಟ್ ಗೆ ಒಳಗಾಗಿರುವವರ ಸಂಖ್ಯೆ ಕೇವಲ 1.9 ಲಕ್ಷ ಮಾತ್ರ. ಈ ಪೈಕಿ 800ಕ್ಕೂ ಮಿಕ್ಕ ಜನರಲ್ಲಿ ಸೋಂಕು ಕಂಡುಬಂದಿದೆ. ರಾಜ್ಯದ ಎಲ್ಲಾ ಜನರನ್ನೂ ಈವರೆಗೆ ಕೊರೋನ ಪರೀಕ್ಷೆಗೆ ಒಳಪಡಿಸಿಯೇ ಇಲ್ಲ. ಒಂದು ವೇಳೆ ಎಲ್ಲರನ್ನೂ ರ‍್ಯಾಪಿಡ್ ಟೆಸ್ಟ್ ಗೆ ಒಳಪಡಿಸಿದರೆ ಸೋಂಕಿತರ ಸಂಖ್ಯೆ ಊಹೆಗೂ ನಿಲುಕದಷ್ಟು ಹೆಚ್ಚಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News