ಕಲಬುರಗಿ: ಕಂಟೈನ್ಮೆಂಟ್ ಝೋನ್ ಮುಕ್ತಗೊಳಿಸಲು ತೆರಳಿದ್ದ ಸಂಸದ ಜಾಧವ್ ಗೆ ಘೇರಾವ್
ಕಲಬುರಗಿ, ಮೇ 10: ಜಿಲ್ಲೆಯ ವಾಡಿ ಪಟ್ಟಣದಲ್ಲಿ ಕಂಟೈನ್ಮೆಂಟ್ ಝೋನ್ ಮುಕ್ತಗೊಳಿಸಲು ತೆರಳಿದ್ದ ಸಂಸದ ಡಾ.ಉಮೇಶ ಜಾಧವ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆದಿದೆ.
ಎರಡು ವರ್ಷದ ಮಗುವಿಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮಗುವಿನ ಕುಟುಂಬ ವಾಸವಿದ್ದ ಪಿಲಕಮ್ಮ ಬಡಾವಣೆಯನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‍ಡೌನ್ ಮಾಡಲಾಗಿತ್ತು.
ಮಗು ಸೋಂಕು ಮುಕ್ತವಾಗಿದ್ದು, ಆ ಬಡಾವಣೆಯಲ್ಲಿ ಮತ್ತೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಅಲ್ಲದೇ, ಸೀಲ್ ಡೌನ್ ಮಾಡಿ 28 ದಿನಗಳ ಕಳೆದಿರುವುದರಿಂದ ರವಿವಾರ ಸಂಸದ ಜಾಧವ್ ಬಡಾವಣೆಗೆ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಲು ಬಂದಿದ್ದರು.
ಆದರೆ, ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಇಷ್ಟು ದಿನ ಸೀಲ್ ಡೌನ್ ಇದ್ದರೂ, ಬಡಾವಣೆ ಜನರನ್ನು ಪರಿಸ್ಥಿತಿ ನೋಡಲು ಬಾರದ ಸಂಸದರು ಈಗ ಬಂದಿದ್ದಾರೆ. ಸಂಸದರು ಕಂಟೈನ್‍ಮೆಂಟ್ ಝೋನ್ ತೆರವುಗೊಳಿಸುವುದು ಬೇಡ. ಪೊಲೀಸರು, ಆರೋಗ್ಯ ಇಲಾಖೆಯೇ ಅಧಿಕಾರಿಗಳು ತೆರವುಗೊಳಿಸಲಿ ಎಂದು ಸಂಸದ ಜಾಧವ್‍ಗೆ ಘೇರಾವ್ ಹಾಕಿದರು.