ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ನಿಧನ

Update: 2020-05-11 13:00 GMT

ರಾಯಚೂರು, ಮೇ 11: ಮಾಜಿ ಸಂಸದ ರಾಜಾ ರಂಗಪ್ಪ ನಾಯಕ (61) ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. 

ರಾಜಕೀಯ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ರಾಜಾ ರಂಗಪ್ಪ ನಾಯಕ 1996ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದರು. ತಾಲೂಕಿನ ರುಕ್ಮಾಪುರ ಮಂಡಲ ಪ್ರಧಾನರಾಗಿ ರಾಜಕೀಯ ಜೀವನ ಆರಂಭಿಸಿದ ಅವರು 1993ರಲ್ಲಿ ಕಲಬುರ್ಗಿ ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

ಮೃತರಿಗೆ ಪುತ್ರ ಕಾಂಗ್ರೆಸ್ ಪಕ್ಷದ ಮುಖಂಡ ರಾಜಾ ರೂಪಕುಮಾರ ನಾಯಕ ಸೇರಿದಂತೆ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ತಂದೆ ದಿವಂಗತ ರಾಜಾ ಕುಮಾರನಾಯಕ ಮೂರು ಬಾರಿ ಸುರಪುರದ ಶಾಸಕರಾಗಿದ್ದರು. ಹಿರಿಯ ಸಹೋದರ ರಾಜಾ ವೆಂಕಟಪ್ಪನಾಯಕ ಅವರೂ ಮೂರು ಬಾರಿ ಶಾಸಕರಾಗಿದ್ದರು. ಕಿರಿಯ ಸಹೋದರ ರಾಜಾ ಮೌನೇಶ್ವರ ನಾಯಕ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು. ಮೃತರ ಗೌರವಾರ್ಥ ನಗರದ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಟ್ವೀಟ್ ಮಾಡಿ, ಮಾಜಿ ಸಂಸದರಾದ ರಾಜಾ ರಂಗಪ್ಪ ನಾಯಕ ಅವರು ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ರಾಜಾ ರಂಗಪ್ಪ ನಾಯಕ ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ. ಕುಟುಂಬ ವರ್ಗದವರು ಹಾಗೂ ಅವರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News