ಮೈಸೂರು: ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಭರವಸೆ ನೀಡಿದ ಶಾಸಕ ಯತೀಂದ್ರ, ತಹಶೀಲ್ದಾರ್

Update: 2020-05-11 17:34 GMT

ಮೈಸೂರು,ಮೇ.11: ತಮ್ಮ ತಮ್ಮ ಊರುಗಳಿಗೆ ತೆರಳಲಾಗದೆ ಕಷ್ಟಪಡುತಿದ್ದ ಉತ್ತರಪ್ರದೇಶದ ವಲಸೆ ಕಾರ್ಮಿಕರ ಪರಿಸ್ಥಿತಿ ಕುರಿತು ಮೇ.10, ರವಿವಾರದಂದು ಪ್ರಕಟಗೊಂಡಿದ್ದ 'ನಂಜನಗೂಡು: ತಮ್ಮ ಊರುಗಳಿಗೆ ತೆರಳಲಾಗದೆ ಬೀದಿಗೆ ಬಿದ್ದ ಉತ್ತರ ಪ್ರದೇಶ ಕಾರ್ಮಿಕರು, ಸರ್ಕಾರದ ನೆರವಿಲ್ಲದೆ ಕಂಗಾಲಾದ ಕಾರ್ಮಿಕರು' ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ವರದಿಗೆ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ತಾಲೂಕು ಆಡಳಿತ ಸ್ಪಂದನೆ ನೀಡಿ ವಲಸೆ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ.

ಉದ್ಯೋಗ ಅರಸಿ ನೂರಾರು ಮಂದಿ ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ “ಯುಬಿ”(ಕಿಂಗ್ ಫಿಷರ್) ಕಂಪನಿ ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್ ನಿಂದಾಗಿ ತತ್ತರಿಸಿ ಹೋದ ವಲಸೆ ಕಾರ್ಮಿಕರು ಇತ್ತ ಕೆಲಸವೂ ಇಲ್ಲದೆ ಅತ್ತ ಮನೆಯವರ ಜೊತೆಯೂ ಇಲ್ಲದೆ ಕಂಗಾಲಾಗಿದ್ದರು. ತಮ್ಮ ತಮ್ಮ ಊರುಗಳಿಗೆ ಹೋದರೆ ಸಾಕು ಎಂದು ಕಳೆದ ಒಂದು ವಾರದಿಂದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಬಳಿ ಅಲವತ್ತುಕೊಳ್ಳುತ್ತಿದ್ದರು. ಇವರ ಕಷ್ಟವನ್ನು ಅರಿತ “ವಾರ್ತಾಭಾರತಿ” ಸುದ್ದಿಯನ್ನು ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಂಡ್ಯಾ ಕೈಗಾರಿಕಾ ಪ್ರದೇಶಕ್ಕೊಳಪಡುವ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿತ್ತು.

ಪತ್ರಿಕೆಯ ವರದಿಗೆ ಸ್ಪಂದಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಂಬಂದ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲಾ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಹೇಳಿದರು. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಎಷ್ಟು ಮಂದಿ ವಲಸೆ ಕಾರ್ಮಿಕರು ಇದ್ದಾರೆ ಎಂಬ ಪಟ್ಟಿಯನ್ನು ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಈ ಸಂಬಂಧ ಸೋಮವಾರ ನಂಜನೂಡು ತಾಲೂಕು ಕಚೇರಿಗೆ ಆಗಮಿಸಿದ್ದ ನೂರಾರು ವಲಸೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ತಹಶೀಲ್ದಾರ್ ಮಹೇಶ್ ಕುಮಾರ್, ಯುಬಿ ಕಂಪನಿಯ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕಂಪನಿ ಕಡೆಯಿಂದ ಆಗಬೇಕಿರುವ ಎಲ್ಲಾ ಅನುಕೂಲಗಳನ್ನು ಮಾಡುವಂತೆ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಕಂಪನಿಯ ಮುಖ್ಯಸ್ಥರು ನಿಮ್ಮ ಊರುಗಳಿಗೆ ತೆರಳಲು ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಕಂಪನಿ ಮಾಡಲಿದೆ. ಅಲ್ಲಿಯವರೆಗೂ ಸ್ವಲ್ಪ ತಾಳ್ಮೆಯಿಂದ ಇರಿ. ಈಗಾಗಲೇ “ಸೇವಾ ಸಿಂಧೂ” ಆಪ್ ನಲ್ಲಿ ನಿಮ್ಮ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ನಿಮ್ಮನ್ನು ನಿಮ್ಮ ನಿಮ್ಮ ಊರುಗಳಿಗೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು. ನೀವು ಊರಿಗೆ ತೆರಳುವವರೆಗೂ ನಿಮಗೆ ಬೇಕಾದ ಊಟ, ತಿಂಡಿ ವ್ಯವಸ್ಥೆಯನ್ನು ಕಂಪನಿ ಮಾಡಲಿದೆ ಎಂದು ಹೇಳಿದರು.

ತಹಶೀಲ್ದಾರ್ ಕಾರ್ಯಕ್ಕೆ ಶ್ಲಾಘನೆ: ಕಳೆದ ನಾಲ್ಕು ದಿನಗಳಿಂದ ಎಲ್ಲಾ ಕಡೆ ನಾವುಗಳು ಅಲೆಯುತ್ತಿದ್ದೆವು. ಎಲ್ಲಿಯೂ ನಮಗೆ ಸಮಾಧಾನಕರ ಉತ್ತರ ದೊರೆತಿರಲಿಲ್ಲ, ತಹಶೀಲ್ದಾರ್ ಸಾಬ್ ನಮಗೆ ಕಂಪನಿಯವರನ್ನು ಕರೆಸಿ ನಮ್ಮ ಊರುಗಳಿಗೆ ತರಳಲು ಆಗಬೇಕಿರುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಕಾರ್ಮಿಕರು ಹೇಳಿದರು. ಜೊತೆಗೆ, ನಾವು ಶನಿವಾರ ಅವರನ್ನು ಭೇಟಿಯಾಗಿದ್ದೆವು. ನಮ್ಮ ಕಷ್ಟ ಆಲಿಸಿದ ಅವರು ನಮಗೆ ಮಧ್ಯಾಹ್ನ ಊಟ ಕೊಡಿಸಿ ನಿಮ್ಮ ರೂಂಗಳಿಗೆ ತರಳಿ ಇನ್ನೆರಡು ದಿನದದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಇದೇ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿ ಮಾದಪ್ಪ, ಗ್ರಾಮಾಂತರ ಪೊಲೀಸ್ ಅರಕ್ಷಕ ಉಪನಿರೀಕ್ಷಕ ಸತೀಶ್, ಎಎಸ್‍ಐ ರಮೇಶ್ ಸೇರಿದಂತೆ ಉತ್ತರ ಪ್ರದೇಶ ಮೂಲದ ಅನಿಲ್, ಸುನೀಲ್, ಪವನ್, ರೋಹಿತ್, ವೀರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

"ಅನುಮತಿ ದೊರೆತ ಕೂಡಲೇ ಕಳುಹಿಸಲಾಗುವುದು"

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಿಕೊಡುವ ಸಂಬಂಧ ಪಟ್ಟಂತೆ ಆ ಕಂಪನಿಯ ಎಚ್‍ಆರ್ ಮ್ಯಾನೇಜರ್ ಅವರನ್ನು ಕರೆಸಿ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಮಹೇಶ್ ಕುಮಾರ್ ತಿಳಿಸಿದರು.

ಈಗಾಗಲೇ “ಸೇವಾ ಸಿಂಧೂ” ಆಪ್ ನಲ್ಲಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಅನುಮತಿ ಪತ್ರ ದೊರೆತಿಲ್ಲ, ಅದನ್ನು ಫಾಲೋ ಅಪ್ ಮಾಡುವಂತ ಕಂಪನಿಯವರಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಯಾವ ರಾಜ್ಯಗಳಿಗೆ ಅವರುಗಳು ತೆರಳಬೇಕೊ ಆಯಾ ರಾಜ್ಯಗಳ ಸರ್ಕಾರದ ನೋಡಲ್ ಅಧಿಕಾರಿಗಳೊಂದಿಗೆ ಮಾತನಾಡಿ ಅವರ ಅನುಮತಿ ದೊರೆತ ಕೂಡಲೇ ಎಲ್ಲರನ್ನೂ ಕಳುಹಿಸಿಕೊಡುವುದಾಗಿ ಹೇಳಿದರು.

ನಮ್ಮ ಅಧಿಕಾರಿಗಳನ್ನು ಕಳುಹಿಸಿ ವಲಸೆ ಕಾರ್ಮಿಕರ ಪಟ್ಟಿ ಮಾಡಲಾಗಿದೆ. ಉತ್ತರ ಪ್ರದೇಶ ರಾಜ್ಯದ ಅನುಮತಿ ದೊರೆತ ಕೂಡಲೇ ಅವರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.
-ಎ.ಸಿ.ಶಿವಣ್ಣ, ಸಹಾಯಕ ನಿರ್ದೇಶಕರು ಕಾರ್ಮಿಕ ಇಲಾಖೆ, ಮೈಸೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News