×
Ad

`ಆರ್ ಟಿಇ' ಸಮಸ್ಯೆ ಪರಿಹಾರಕ್ಕೆ ಒತ್ತಡ ಹೇರಲು ಸಿದ್ದರಾಮಯ್ಯರಿಗೆ ವಿದ್ಯಾರ್ಥಿಗಳು, ಪೋಷಕರ ಮನವಿ

Update: 2020-05-11 23:07 IST

ಬೆಂಗಳೂರು, ಮೇ 11: 'ಶಿಕ್ಷಣ ಹಕ್ಕು ಕಾಯ್ದೆ'(ಆರ್‍ಟಿಇ)ಯಲ್ಲಿನ ಕೆಲವು ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಕೋರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆರ್‍ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪದಾಧಿಕಾರಿಗಳು ಇಂದಿಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗಾನಂದ ನೇತೃತ್ವದ ನಿಯೋಗ, ಕುಮಾರಸ್ವಾಮಿ ನೇತೃತ್ವದ ಸರಕಾರ ಆರ್‍ಟಿಇ ನಿಯಮ 4ಕ್ಕೆ ತಿದ್ದುಪಡಿ ತರುವ ಮೂಲಕ 'ನೆರೆಹೊರೆಯಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಿದ್ದಲ್ಲಿ ಅಂತಹ ಕಡೆ ಆರ್‍ಟಿಇ ಅಡಿ ಅನುದಾನ ರಹಿತ ಶಾಲೆಗಳನ್ನು ಗುರುತಿಸತಕ್ಕದ್ದಲ್ಲ' ಎಂದು ಆದೇಶಿಸಿದೆ.

ಹೀಗಾಗಿ ಪ್ರತಿವರ್ಷ ಆರ್‍ಟಿಇನಡಿ ಒಂದೂವರೆ ಲಕ್ಷ ಬಡ ಮಕ್ಕಳಿಗೆ ಅವಕಾಶ ಸಿಗುತ್ತಿದ್ದ ಕಡೆ ಇದೀಗ ಕೇವಲ 17 ಸಾವಿರಕ್ಕೆ ಇಳಿದಿದ್ದು, ಇದರಿಂದ ಬಡ ಮಕ್ಕಳ ಉಚಿತ, ಕಡ್ಡಾಯ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಈ ನಿಯಮಕ್ಕೆ ತಿದ್ದುಪಡಿ ತರಬೇಕು. ಆರ್‍ಟಿಇ ಕಾಯ್ದೆಯಡಿ ಪ್ರಯೋಜನ ಪಡೆದ ಎಂಟನೆ ತರಗತಿ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸರಕಾರ ಮಾನವೀಯತೆ ದೃಷ್ಟಿಯಿಂದ ಹತ್ತನೆ ತರಗತಿಯ ವರೆಗೆ ಶುಲ್ಕ ಭರಿಸುವ ಯೋಜನೆಯನ್ನು ವಿಸ್ತರಿಸಬೇಕು. 2020-21ನೆ ಸಾಲಿನ ದಾಖಲಾತಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದು, ಕೂಡಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಿ ಗೊಂದಲದಲ್ಲಿರುವ ಪೋಷಕರಿಗೆ ಆರ್‍ಟಿಇ ಸೌಲಭ್ಯದ ಬಗ್ಗೆ ಖಚಿತಪಡಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News