ರಾಜ್ಯದಲ್ಲಿ ಒಂದೇ ದಿನ 63 ಮಂದಿಗೆ ಕೊರೋನ ಪಾಸಿಟಿವ್: ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆ

Update: 2020-05-12 12:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.12: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಸೋಮವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ ಒಟ್ಟು 63 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟಿನ್ ‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.

ಈ ಪೈಕಿ ಬಾಗಲಕೋಟೆಯ 15 ಮಂದಿ, ದಾವಣಗೆರೆ 12, ಧಾರವಾಡದ 9 ಮಂದಿ, ಹಾಸನ 5, ಕೋಲಾರ 5, ಗದಗ 3, ಬೆಂಗಳೂರು ನಗರದಲ್ಲಿ 4, ದ.ಕ.ಜಿಲ್ಲೆ 2, ಯಾದಗಿರಿ 2, ಬೀದರ್ ನಲ್ಲಿ ಎರಡು ಹಾಗೂ ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಮಂಡ್ಯದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಹಸಿರು ವಲಯದಲ್ಲಿದ್ದ ಹಾಸನ, ಕೋಲಾರ, ಯಾದಗಿರಿಯಲ್ಲಿ ಇದೇ ಮೊದಲ ಬಾರಿಗೆ ಕೊರೋನ ಪಾಸಿಟಿವ್ ಬಂದಿದೆ. ಇತ್ತೀಚಿಗಷ್ಟೆ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿತ್ತು.

ಒಟ್ಟಾರೆ ರಾಜ್ಯದ 925 ಕೊರೋನ ಸೋಂಕಿತರ ಪೈಕಿ 433 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 31 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News