×
Ad

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ: ರಾಜ್ಯಕ್ಕೆ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆ

Update: 2020-05-12 20:12 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಎಪ್ರಿಲ್‍ನಿಂದ ಜೂನ್‍ವರೆಗೆ 3 ತಿಂಗಳ ಕಾಲ 4.01 ಕೋಟಿ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲು 2,351 ಕೋಟಿ ರೂ.ಗಳ ವೆಚ್ಚವನ್ನು ಕೇಂದ್ರ ಸರಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರಕಾರ 1,735 ಕೋಟಿ ರೂ.ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯದ ಎತ್ತುವಳಿ ಮಾಡಿದೆ.

ಲಾಕ್‍ಡೌನ್ ಸಮಯದಲ್ಲಿ 302 ರೈಲು ರೇಕ್‍ಲೋಡ್ ಅಂದರೆ 8.03 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ರಾಜ್ಯಕ್ಕೆ ನೀಡಿರುವುದಾಗಿ ಭಾರತ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್ ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮದ ಕರ್ನಾಟಕ ವಿಭಾಗ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ ರಾಜ್ಯದ ಆಹಾರಧಾನ್ಯದ ಅಗತ್ಯತೆಗಳನ್ನು ಪೂರೈಸಲು ಇದುವರೆಗೆ ಪ್ರತಿನಿತ್ಯ 7.48 ಲಕ್ಷ ಚೀಲ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಸ್ವೀಕರಿಸಿ ರಾಜ್ಯದಲ್ಲಿ ವಿತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿಯಲ್ಲಿ ರಾಜ್ಯ ಸರಕಾರವು 2.51 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿದೆ. ಭಾರತ ಸರಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ವಿತರಣೆಗಾಗಿ ಕರ್ನಾಟಕಕ್ಕೆ ಪೂರೈಸಿದ ಒಟ್ಟು ಆಹಾರ ಧಾನ್ಯಗಳ ಪ್ರಮಾಣ 8.51 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ತಲಾ 50 ಕೆಜಿಯ ಸುಮಾರು 1.70 ಕೋಟಿ ಚೀಲಗಳಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

ಭಾರತ ಆಹಾರ ನಿಗಮವು ಆಹಾರ ಧಾನ್ಯಗಳ ಖರೀದಿ, ಸಾಗಾಟ ಮತ್ತು ದಾಸ್ತಾನಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜೊತೆಗೆ ಪಿಎಂಜಿಕೆಎವೈ ಅಡಿಯಲ್ಲಿ ನೀಡಲಾದ ಎಲ್ಲ ಆಹಾರ ಧಾನ್ಯಗಳನ್ನು ರಾಜ್ಯ ಸರಕಾರವು ಸಕಾಲದಲ್ಲಿ ಎತ್ತುವಳಿ ಮಾಡುವಂತೆ ನೋಡಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಆಹಾರ ಧಾನ್ಯಗಳ ಸಮರ್ಪಕ ಲಭ್ಯತೆಯಿದೆ. ಬಡ ಜನತೆಗೆ ಆಹಾರದ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News