ಮುಂಬೈನಿಂದ ಕಲಬುರಗಿಗೆ ರೈಲಿನಲ್ಲಿ ಆಗಮಿಸಿದ 1,200 ವಲಸೆ ಕಾರ್ಮಿಕರು
Update: 2020-05-12 20:38 IST
ಕಲಬುರಗಿ, ಮೇ 12: ಲಾಕ್‍ಡೌನ್ ಜಾರಿಯಿಂದಾಗಿ ಮುಂಬೈಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ 1,200 ವಲಸೆ ಕಾರ್ಮಿಕರನ್ನು ಹೊತ್ತ ವಿಶೇಷ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಮಂಗಳವಾರ ಬೆಳಗ್ಗೆ 2ಗಂಟೆಗೆ ಕಲಬುರಗಿಗೆ ಆಗಮಿಸಿದೆ.
ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ರೈಲು ನಿಲ್ದಾಣದಲ್ಲಿ ಖುದ್ದು ಹಾಜರಿದ್ದು, ವಲಸೆ ಕಾರ್ಮಿಕರನ್ನು ಸ್ವಾಗತ ಕೋರಿದರು.
ವಲಸೆ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿ, ಕೈಗಳಿಗೆ ಮುದ್ರೆ ಹಾಕಲಾಯಿತು. ಬಳಿಕ ಅವರ ಊರುಗಳ ಬಳಿ ವ್ಯವಸ್ಥೆ ಮಾಡಲಾಗಿದ್ದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು.
ಪ್ರಯಾಣಿಕರು ರೈಲಿನಿಂದ ಇಳಿಯುವಾಗ ದಟ್ಟಣೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಒಂದು ಬೋಗಿಯಲ್ಲಿನ ಪ್ರಯಾಣಿಕರನ್ನು ನಿಗದಿತ ಬಸ್‍ಗೆ ಹೋಗಲು ವ್ಯವಸ್ಥೆ ಮಾಡಿದ ನಂತರ ಇತರ ಬೋಗಿಗಳ ಪ್ರಯಾಣಿಕರು ರೈಲಿನಿಂದ ಇಳಿಯುವಂತೆ ನೋಡಿಕೊಳ್ಳಲಾಯಿತು.