ಸರಕಾರಿ ವೆಚ್ಚದಲ್ಲೇ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ
ಮಂಗಳೂರು, ಮೇ 12: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರು ಅನಿವಾರ್ಯವಾಗಿ ತವರೂರಿಗೆ ಮರಳುತ್ತಿದ್ದಾರೆ. ಆರೋಗ್ಯ ಸುರಕ್ಷತೆಯ ಕಾರಣಕ್ಕಾಗಿ ಅವರನ್ನು ‘ಕ್ವಾರಂಟೈನ್’ ಮಾಡಲಾಗುತ್ತದೆ. ದುಡಿಯುವ ವರ್ಗದ ಹಿತಾಸಕ್ತಿಗಾಗಿ ರಾಜ್ಯ ಸರಕಾರವು ಈಗಾಗಲೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ನಿಟ್ಟಿನಲ್ಲಿ ತವರೂರಿಗೆ ಆಗಮಿಸುತ್ತಿರುವ ಅನಿವಾಸಿ ಕನ್ನಡಿಗರ ‘ಕ್ವಾರಂಟೈನ್’ಗೆ ಯಾವುದೇ ಶುಲ್ಕ ವಿಧಿಸಬಾರದು. ಅವರ ಕ್ವಾರಂಟೈನ್ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್‌ಕೆಎಂ ಶಾಫಿ ಸಅದಿ ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಗಲ್ಫ್ ರಾಷ್ಟ್ರದಲ್ಲಿ ದುಡಿಮೆಯಿಲ್ಲದೆ ಸಂಕಷ್ಟದಲ್ಲಿರುವವರು ಬರಿಗೈಯಲ್ಲಿ ಊರಿಗೆ ಬರುತ್ತಿದ್ದಾರೆ. ಸರಕಾರದ ನಿಯಮಾವಳಿಯಂತೆ ಅವರು ಕ್ವಾರಂಟೈನ್‌ಗೆ ಒಳಗಾಗುತ್ತಿದ್ದಾರೆ. ಯಾವ ಕಾರಣಕ್ಕೂ ಅವರಿಂದ ಶುಲ್ಕ ಅಥವಾ ವೆಚ್ಚ ವಸೂಲಿ ಮಾಡಬಾರದು. ಸರಕಾರ ಉಚಿತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವ ಮೂಲಕ ಅನಿವಾಸಿ ಕನ್ನಡಿಗರ ನೆರವಿಗೆ ಧಾವಿಸಬೇಕು ಎಂದು ಶಾಫಿ ಸಅದಿ ಒತ್ತಾಯಿಸಿದ್ದಾರೆ.
ತಾನು ಈಗಾಗಲೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಕಚೇರಿಯ ಕಾರ್ಯಾಲಯದ ಅಧಿಕಾರಿ ಹಾಗೂ ದ.ಕ.ಜಿಲ್ಲಾಧಿಕಾರಿಯ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಆಡಳಿತ ವ್ಯವಸ್ಥೆ-ವರ್ಗದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.