ರೈಲು ಆರಂಭ: 16 ಕೋಟಿ ರೂ. ಮೌಲ್ಯದ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು

Update: 2020-05-12 16:27 GMT

ಹೊಸದಿಲ್ಲಿ: ಭಾರತೀಯ ರೈಲ್ವೆ ಆರಂಭಿಸಿರುವ ವಿಶೇಷ ರೈಲು ಸೇವೆಗೆ 80 ಸಾವಿರಕ್ಕೂ ಅಧಿಕ ಪ್ರಯಾಣಿಕರು, 16 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

ವಿಶೇಷ ರೈಲು ಸರಣಿಯ ಮೊದಲ ರೈಲು ಹೊಸದಿಲ್ಲಿಯಿಂದ ಮಧ್ಯಪ್ರದೇಶದ ಬಿಲಾಸ್‌ಪುರಕ್ಕೆ ಹೊರಡುವ ಕೆಲವೇ ಗಂಟೆಗಳಿಗೆ ಮೊದಲು ಈ ಮಾಹಿತಿ ನೀಡಿದೆ. ಒಟ್ಟು 45,533 (ಪಿಎನ್‌ಆರ್‌ಗಳು) ಬುಕ್ಕಿಂಗ್ ಆಗಿದ್ದು, ಮುಂದಿನ ಒಂದು ವಾರದ ಅವಧಿಗೆ 16.15 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ಕಾಯ್ದಿರಿಸಲಾಗಿದೆ. ಇದರ ಅನ್ವಯ ಒಟ್ಟು 82,317 ಮಂದಿ ಪ್ರಯಾಣಿಸಲಿದ್ದಾರೆ ಎಂದು ವಿವರಿಸಿದೆ.

ಸೋಮವಾರ ಸಂಜೆ 6ಕ್ಕೆ ಮೊದಲ ರೈಲು ತನ್ನ ಯಾನ ಆರಂಭಿಸಿದ್ದು, ವಿಶೇಷ ರೈಲುಗಳಿಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ರೈಲ್ವೆ ಬಿಡುಗಡೆ ಮಾಡಿದೆ. ಪ್ರಯಾಣಿಕರು ತಮ್ಮ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ರೈಲು ಹೊರಡುವ ಕನಿಷ್ಠ 90 ನಿಮಿಷ ಮೊದಲು ಆರೋಗ್ಯ ತಪಾಸಣೆಗಾಗಿ ರೈಲು ನಿಲ್ದಾಣಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ. ಎಲ್ಲ ಪ್ರಯಾಣಿಕರಿಗೆ ಆರೋಗ್ಯಸೇತು ಆ್ಯಪ್ ಕಡ್ಡಾಯವಾಗಿರುತ್ತದೆ.

ಮಂಗಳವಾರ ದೆಹಲಿಯಿಂದ ದಿಬ್ರೂಗಢ, ಬೆಂಗಳೂರು ಹಾಗೂ ಬಿಲಾಸ್‌ಪುರಕ್ಕೆ ರೈಲುಗಳು ಹೊರಡಲಿವೆ. ಹೌರಾ, ಪಾಟ್ನಾ, ಬೆಂಗಳೂರು, ಮುಂಬೈ ಸೆಂಟ್ರಲ್ ಹಾಗೂ ಅಹ್ಮದಾಬಾದ್‌ನಿಂದ ದೆಹಲಿಗೆ ತಲಾ ಒಂದು ರೈಲು ಹೊರಡಲಿದೆ. ವಿಶೇಷ ರೈಲುಗಳಲ್ಲಿ ಹವಾನಿಯಂತ್ರಿತ ಬೋಗಿಗಳಷ್ಟೇ ಇರುತ್ತವೆ. ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದೃಢೀಕರಣಗೊಂಡ ಪ್ರತಿ ಇ-ಟಿಕೆಟ್‌ಗೆ ಒಬ್ಬರು ಮಾತ್ರ ನಿಲ್ದಾಣದೊಳಗೆ ಪ್ರವೇಶಿಸಬಹುದಾಗಿದೆ.

ವಿಶೇಷ ರೈಲಿನ ಪ್ರಯಾಣದರ ರಾಜಧಾನಿ ರೈಲಿನ ದರಕ್ಕೆ ಸಮಾನವಾಗಿರುತ್ತದೆ ಹಾಗೂ ಏಳು ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಆರ್‌ಎಸಿ, ವೆಯ್ಟಿಂಗ್ ಲಿಸ್ಟ್ ಟಿಕೆಟ್ ನೀಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News