ನೀರಿನಲ್ಲಿ ಮುಳುಗಿಸಿ ಪತ್ನಿಯನ್ನು ಕೊಲೆಗೈದ ವ್ಯಕ್ತಿ: ಆರೋಪ

Update: 2020-05-12 17:32 GMT

ಮಂಡ್ಯ, ಮೇ 12: ಕೃಷ್ಣರಾಜಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ಶುಂಠಿ ಬೆಳೆ ಬೇಸಾಯ ಮಾಡಲು ಆಗಮಿಸಿದ್ದ ವ್ಯಕ್ತಿಯು ತನ್ನ ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆನ್ನಲಾದ ಘಟನೆ ಮಂಗಳವಾರ ನಡೆದಿದೆ.

ಕೃಷ್ಣರಾಜಪೇಟೆ ತಾಲೂಕಿನಲ್ಲಿ ಶುಂಠಿ ಬೆಳೆಯ ಬೇಸಾಯ ಮಾಡಲು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಿಂದ ತನ್ನ ಪತ್ನಿ ಮುನಿಯಮ್ಮಳ ಜೊತೆ ಆಗಮಿಸಿದ್ದ ಮೇಸ್ತ್ರಿ ಸ್ವಾಮಿ, ಹರಿಹರಪುರದಲ್ಲಿ ತನ್ನ ಪತ್ನಿ ಹಾಗೂ ಎರಡು ಮಕ್ಕಳೊಂದಿಗೆ ನೆಲೆಸಿದ್ದ. ಶುಂಠಿ ಬೆಳೆ ಬೇಸಾಯದ ಗುತ್ತಿಗೆಯನ್ನು ಪಡೆದುಕೊಂಡಿದ್ದ ಸ್ವಾಮಿಯು ಮಂಗಳವಾರ ಮಧ್ಯಾಹ್ನ ಸುಮಾರು 3.30ರ ಸಮಯದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶವಾದ ಹೇಮಾವತಿ ಎಡದಂಡೆ ನಾಲೆ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಮುನಿಯಮ್ಮಳ ಕೊಲೆಯಿಂದಾಗಿ ಚಂದು(3) ಮತ್ತು ಸಿಂಚನ(2) ಎಂಬ ಎರಡು ಮಕ್ಕಳು ಅನಾಥವಾಗಿವೆ. ಕೃತ್ಯ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿ ಷ್ಠಾಧಿಕಾರಿ ಡಾ.ಶೋಭಾರಾಣಿ, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್, ಗ್ರಾಮಾಂತರ ಪೊಲಿಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಡಿ.ಲಕ್ಷ್ಮಣ್ ಭೇಟಿ ನೀಡಿ ಪರಿಶೀಲಿಸಿದರು.

ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News