ಚಿಕ್ಕಮಗಳೂರು: ಸಚಿವ ರಮೇಶ್ ಜಾರಕಿಹೊಳಿಗೆ ರೈತರಿಂದ ಘೇರಾವ್
ಚಿಕ್ಕಮಗಳೂರು, ಮೇ 12: ಜಿಲ್ಲೆಯ ಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲಾ ಕಾಮಗಾರಿಗಳ ಪರಿಶೀಲನೆಗೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ರೈತರು ಘೇರಾವ್ ಹಾಕಿದ ಘಟನೆ ಮಂಗಳವಾರ ನಡೆಯಿತು.
ಭದ್ರಾ ಮೇಲಂಡೆ ಯೋಜನೆಯ ಕಾಮಗಾರಿಗಳೂ ಸೇರಿದಂತೆ ಗ್ರಾಮದ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯನ್ನು ಕಳಪೆಯಾಗಿದೆ ಎಂದು ಆರೋಪಿಸಿದ ರೈತರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಾಮಗಾರಿ ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡದ ಸಚಿವರ ವಿರುದ್ಧ ಕುಪಿತರಾದ ಸ್ಥಳೀಯರು ಧಿಕ್ಕಾರ ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸಚಿವರು ಸೇರಿದಂತೆ ಸ್ಥಳದಲ್ಲಿದ್ದ ಶಾಸಕರು, ಅಧಿಕಾರಿಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿ ತೋರಿದ್ದು, ಜನಪ್ರತಿನಿಧಿಗಳೇ ಸರಕಾರದ ಆದೇಶವನ್ನು ಉಲ್ಲಂಘಿಸಿದರೆ ಸಾಮಾನ್ಯ ಜನರ ಪಾಡೇನೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಡಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಗ್ರಾಮಕ್ಕೆ ಆಗಮಿಸಿದ ವೇಳೆ ಶಾಸಕರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅವರನ್ನು ಸುತ್ತುವರಿದು ಶಾಲು ಹೊದಿಸಿ ಸ್ವಾಗತಿಸಿದರು. ಈ ವೇಳೆ ಶಾಸಕ ಡಿ.ಎಸ್.ಸುರೇಶ್ ಹಾಗೂ ಗೂಳಿಹಟ್ಟಿ ಶೇಖರ್ ಎಲ್ಲರೂ ಸುರಕ್ಷಿತ ಅಂತರ ಪಾಲನೆಯನ್ನು ಗಾಳಿಗೆ ತೂರಿದ್ದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಸಚಿವರನ್ನು ಮುತ್ತಿಕೊಂಡಿದ್ದರೂ ಕ್ರಮಕೈಗೊಳ್ಳಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.