ಆನಂದ್ ತೇಲ್ತುಂಬ್ಡೆ, ಮಾನವ ಹಕ್ಕು ಹೋರಾಟಗಾರರ ಬಂಧನ ವಿರೋಧಿಸಿ ಮೇ 16ರಂದು ನ್ಯಾಯದಿನವನ್ನಾಗಿ ಆಚರಿಸಲು ಕರೆ
ಬೆಂಗಳೂರು, ಮೇ 13: ಹಿರಿಯ ವಿಚಾರವಾದಿ ಹಾಗೂ ಮಾನವ ಹಕ್ಕು ಹೋರಾಟಗಾರ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿ ಒಂದು ತಿಂಗಳಾಗುತ್ತಿದೆ. ದೇಶದ ಒಬ್ಬ ಪ್ರಮುಖ ವಿದ್ವಾಂಸರೊಂದಿಗೆ ಹಾಗೂ ಭೀಮಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಚಿಂತಕರೊಂದಿಗೆ ನಾವಿದ್ದೇವೆಂಬ ಬೆಂಬಲಾರ್ಥವಾಗಿ ಮೇ 16ರಂದು ನ್ಯಾಯದಿನವನ್ನಾಗಿ ಆಚರಿಸುವಂತೆ ಹಿರಿಯ ನ್ಯಾಯವಾದಿಗಳು, ನ್ಯಾಯಮೂರ್ತಿಗಳು, ಮಾನವ ಹಕ್ಕು ಹೋರಾಟಗಾರರು ಜನತೆಗೆ ಕರೆ ನೀಡಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಚಿಂತಕ ಆನಂದ್ ತೇಲ್ತುಂಬ್ಡೆ ದೇಶದ ಸಾಮಾಜಿಕ ನ್ಯಾಯದ ದನಿಯಾಗಿದ್ದಾರೆ. ತಮ್ಮ ಬರಹಗಳ ಮೂಲಕ ಜಾತಿ, ಕೋಮುವಾದಿ ದೌರ್ಜನ್ಯಗಳ ಸ್ವರೂಪವನ್ನು ಸಾರ್ವಜನಿಕರೆದುರು ತೆರೆದಿಟ್ಟಿದ್ದಾರೆ. ಎಲ್ಲ ಸರಕಾರದ ಅವಧಿಯಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ್ದಾರೆ. ಬಹುಮುಖ್ಯವಾಗಿ ದಲಿತರಿಗೆ, ತುಳಿತಕ್ಕೆ ಒಳಗಾದವರ ಪರವಾಗಿ ನ್ಯಾಯದ ಸಂಕೇತವಾಗಿದ್ದ ಇವರನ್ನು ಕೇಂದ್ರ ಸರಕಾರ ಯಾವುದೇ ವಿಚಾರಣೆ ಇಲ್ಲದೆ ಯುಎಪಿಎ ಅಡಿಯಲ್ಲಿ ಬಂಧಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇವರ ಬಂಧನ ಹಾಗೂ ಎಲ್ಲ ಮಾನವ ಹಕ್ಕು ಹೋರಾಟಗಾರರ ಬಂಧನ ವಿರೋಧಿಸಿ ದೇಶದ ಪ್ರಮುಖ ನ್ಯಾಯಮೂರ್ತಿಗಳು, ಮಾನವ ಹಕ್ಕು ಹೋರಾಟಗಾರರು, ಪರಿಸರವಾದಿಗಳು ಅಭಿಯಾನಕ್ಕೆ ಮುಂದಾಗಿದ್ದಾರೆ.
ಈ ಅಭಿಯಾನಕ್ಕೆ ಹಿರಿಯ ಪರಿಸರವಾದಿ ಯಲ್ಲಪ್ಪ ರೆಡ್ಡಿ, ನಿವೃತ್ತ ನ್ಯಾ.ಗೋಪಾಲ ಗೌಡ, ನಾಗಮೋಹನ ದಾಸ್, ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೆಂಜವಾಡ ವಿಲ್ಸನ್, ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಸ್ವರಾಜ್ ಅಧ್ಯಕ್ಷ ಯೋಗೇಂದ್ರ ಯಾದವ್, ದೇವನೂರ ಮಹಾದೇವ ಸೇರಿದಂತೆ ದೇಶದ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.
'ಸಾರ್ವಜನಿಕರಿಗೆ ಕರೆ'
-ಸಾರ್ವಜನಿಕರು ಮೇ 16ರಂದು ಸಾಮಾಜಿಕ ಮಾಧ್ಯಮದ ಪ್ರೊಫೈಲ್‍ಗಳಿಗೆ ಡಾ.ಆನಂದ್ ತೇಲ್ತುಂಬ್ಡೆ ಫೋಟೋವನ್ನು ಹಾಕಿಕೊಳ್ಳಬೇಕು. ಹಾಗೂ ಸುಮಾರು ಎರಡು ಗಂಟೆಗಳ ಕಾಲ ಜಸ್ಟೀಸ್ ಫಾರ್ ತೇಲ್ತುಂಬ್ಡೆ ಅಭಿಯಾನ ನಡೆಸಬೇಕು. ಮೇ ತಿಂಗಳು ಸಂಪೂರ್ಣವಾಗಿ ತೇಲ್ತುಂಬ್ಡೆ ಹಾಗೂ ಡಾ.ಅಂಬೇಡ್ಕರ್ ಬರಹಗಳನ್ನು ಓದಬೇಕು ಎಂದು ಕರೆ ನೀಡಲಾಗಿದೆ.