ವಲಸೆ ಕಾರ್ಮಿಕರಿಗೆ ರೈಲ್ವೆ ವ್ಯವಸ್ಥೆ: ಆಶ್ವಾಸನೆ ನೀಡಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2020-05-13 13:14 GMT

ಬೆಂಗಳೂರು, ಮೇ 13: ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದರೆ ಅವರೆಲ್ಲರಿಗೂ ಹಂತ ಹಂತವಾಗಿ ರೈಲುಗಳ ಮೂಲಕ ಪ್ರಯಾಣಿಸಲು ಅವಕಾಶ ನೀಡಲಾಗುವುದು ಆಶ್ವಾಸನೆ ನೀಡಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ವಲಸೆ ಕಾರ್ಮಿಕರ ಕುರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠವು ವಲಸೆ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ತಮ್ಮ ತವರು ರಾಜ್ಯಗಳಿಗೆ ಪ್ರಯಾಣಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.  ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈಲ್ವೆ ಶುಲ್ಕ ಪಾವತಿಸುವ ತೀರ್ಮಾನವನ್ನು ಕೈಗೊಂಡು, ಅವರನ್ನು ತವರು ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದರು. 

ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹೋಗಿರುವ ವಲಸೆ ಕಾರ್ಮಿಕರನ್ನು ವಾಪಸ್ ಕರೆ ತರಲು ಯಾವ ವ್ಯವಸ್ಥೆಗಳನ್ನು ಮಾಡಲಾಗಿದೆ ಹಾಗೂ ಅವರಿಗೆ ಪ್ರಯಾಣ ಶುಲ್ಕದ ವ್ಯವಸ್ಥೆ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರಕಾರಕ್ಕೆ ನ್ಯಾಯಪೀಠವು  ನಿರ್ದೇಶನ ನೀಡಿತು. 

ರೈಲ್ವೆ ಟಿಕೆಟ್‍ಗೆ ಹಣ ಪಾವತಿಸಲು ವಲಸೆ ಕಾರ್ಮಿಕರಲ್ಲಿ ಶಕ್ತಿ ಇಲ್ಲ ಎಂದ ಮಾತ್ರಕ್ಕೆ ಅವರು ತಮ್ಮ ತವರು ರಾಜ್ಯಗಳಿಗೆ ಹೋಗುವ ಅವಕಾಶವನ್ನು ಎಂದೂ ಕಳೆದುಕೊಳ್ಳಬಾರದು. ವಲಸೆ ಕಾರ್ಮಿಕರು ಸಾರ್ವಜನಿಕ ನಿರ್ಮಾಣ ಯೋಜನೆ ಹಾಗೂ ಖಾಸಗಿ ನಿರ್ಮಾಣ ಯೋಜನೆಯಲ್ಲಿ ಅವರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಾಯ ಮಾಡುವ ಅವಶ್ಯಕತೆ ಇದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. 

ಗ್ರಾಮಗಳಲ್ಲಿ ತಮ್ಮ ಕುಟುಂಬದವರನ್ನು ತೊರೆದು ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗಿರುತ್ತಾರೆ. ಆದರೆ, ಉದ್ಯೋಗ ನೀಡಿದ ಉದ್ಯಮಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೆ ಅವರಿಂದು ತಮ್ಮ ತವರು ರಾಜ್ಯಗಳಿಗೆ ಹೋಗಲು ಮುಂದಾಗುತ್ತಿರಲಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಎನ್‍ಜಿಒ, ಉದ್ಯಮಿಗಳು, ಸಂಘ-ಸಂಸ್ಥೆಗಳು ರೈಲ್ವೆ ಟಿಕೆಟ್ ಖರೀದಿಸಲು ಶಕ್ತಿ ಇಲ್ಲದ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಾರೆಯೇ ಎಂಬುದರ ಬಗ್ಗೆ ಈ ಕೂಡಲೆ ಸಭೆ ಕರೆಯಬೇಕೆಂದು ಪೀಠವು ಸರಕಾರಕ್ಕೆ ಸೂಚನೆ ನೀಡಿದರು. ಬಿಎಂಆರ್‍ಸಿಎಲ್ ವಕೀಲರು ವಾದಿಸಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಟ್ರೋ ರೈಲ್ವೆಯನ್ನು ಸ್ಥಗಿತಗೊಳಿಸುವಾಗ ಎಲ್ಲ ಕಾರ್ಮಿಕರಿಗೆ ವೇತನ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News