×
Ad

ರಾಜ್ಯದಲ್ಲಿ ಕೊರೋನಗೆ ಮತ್ತೆರಡು ಬಲಿ: ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ

Update: 2020-05-13 21:13 IST

ಬೆಂಗಳೂರು, ಮೇ 13: ರಾಜ್ಯದಲ್ಲಿ ಕೊರೋನದಿಂದ ಮೃತಪಡುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಬುಧವಾರ ಮತ್ತಿಬ್ಬರು ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮೃತಪಟ್ಟವರ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.

ಕಲಬುರಗಿ ಜಿಲ್ಲೆಯ ನಿವಾಸಿಯಾದ 60 ವರ್ಷದ ಪುರುಷರಾಗಿದ್ದು, ನಿಗದಿತ ಆಸ್ಪತ್ರೆಗೆ ಕರೆತರುವ ಮೊದಲೇ ಮೇ 11 ರಂದು ಮೃತಪಟ್ಟಿದ್ದರು. ಇವರಲ್ಲಿ ಕೋವಿಡ್-19 ಪಾಸಿಟಿವ್ ವರದಿ ಖಚಿತವಾಗಿದೆ. ಇನ್ನು ದಕ್ಷಿಣಕನ್ನಡ ಜಿಲ್ಲೆಯ ನಿವಾಸಿಯಾದ 58 ವರ್ಷದ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಸೋಂಕಿನಿಂದ(ಕ್ಷಯರೋಗ) ಬಳಲಿಕೆಗೆ ಚಿಕಿತ್ಸೆ ಪಡೆಯುತ್ತಿದ್ದು, ಎ.28 ರಂದು ಕೋವಿಡ್ ಸೋಂಕಿರುವುದು ದೃಢಪಟ್ಟಿತ್ತು. ಇವರನ್ನು ನಿಗದಿತ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಬುಧವಾರ 34 ಹೊಸದಾಗಿ ಕೋವಿಡ್ 19 ಪಾಸಿಟಿವ್ ವರದಿಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 959 ಕ್ಕೆ ಏರಿಕೆಯಾಗಿದೆ. ಅದರಲ್ಲಿ 451 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 474 ಸಕ್ರಿಯ ಪ್ರಕರಣಗಳ ಪೈಕಿ 464 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 10 ಜನರನ್ನು ಐಸಿಯುನಲ್ಲಿಡಲಾಗಿದೆ.

ಬೀದರ್‍ನ ಕಂಟೈನ್ಮೆಂಟ್ ಝೋನ್‍ಗೆ ಭೇಟಿ ನೀಡಿದ ಸಂಪರ್ಕದ ಹಿನ್ನೆಲೆಯುಳ್ಳವರಾಗಿರುವ 12 ಜನರಲ್ಲಿ ಕೋವಿಡ್ 19 ವರದಿಗಳು ಪಾಸಿಟಿವ್ ಬಂದಿವೆ. ಹಾಸನದಲ್ಲಿ ಮತ್ತೆ ನಾಲ್ಕು ಪ್ರಕರಣಗಳು ವರದಿಯಾಗಿದ್ದರೆ, ಕಲಬುರಗಿಯಲ್ಲಿ 8 ವರದಿಗಳು ಪಾಸಿಟಿವ್ ಬಂದಿವೆ. ಬೆಂಗಳೂರು ನಗರ 2, ಉತ್ತರಕನ್ನಡ 2, ದಕ್ಷಿಣಕನ್ನಡ 1, ವಿಜಯಪುರ 2, ದಾವಣಗೆರೆ 2 ಹಾಗೂ ಬಳ್ಳಾರಿಯಲ್ಲಿ 1 ಪಾಸಿಟಿವ್ ವರದಿಗಳು ದೃಢಪಟ್ಟಿವೆ.

ಬೆಂಗಳೂರು ನಗರದಲ್ಲಿ 184, ಬೆಳಗಾವಿ 113, ಮೈಸೂರು 88, ದಾವಣಗೆರೆ 85, ಕಲಬುರಗಿ 81, ಬಾಗಲಕೋಟೆ 68, ವಿಜಯಪುರ 52, ಉತ್ತರಕನ್ನಡ 41, ಬೀದರ್ 41, ಮಂಡ್ಯ 31 ಸೇರಿದಂತೆ ರಾಜ್ಯದಲ್ಲಿ 959 ಸೋಂಕಿತರಿದ್ದಾರೆ. ಅದರಲ್ಲಿ 451 ವರದಿಗಳು ಸಕ್ರಿಯವಾಗಿವೆ.
ಬುಧವಾರ ಬೆಳಗಾವಿಯಲ್ಲಿ 5, ಬೆಂಗಳೂರು ನಗರ 4, ದಕ್ಷಿಣಕನ್ನಡ 1, ಮಂಡ್ಯ 5, ಬಳ್ಳಾರಿ 1, ಬೀದರ್ 1, ವಿಜಯಪುರದಲ್ಲಿ ಒಬ್ಬರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೆ, ವಿವಿಧ ಜಿಲ್ಲೆಗಳಲ್ಲಿ 358 ಶಂಕಿತ ಜನರನ್ನು ಗುರುತಿಸಿ ಪ್ರತ್ಯೇಕವಾಗಿಸಲಾಗಿದ್ದು, 137 ಜನರು ಬಿಡುಗಡೆಗೊಳಿಸಲಾಗಿದೆ.

ರಾಜ್ಯದಲ್ಲಿರುವ 532 ಜ್ವರಚಿಕಿತ್ಸಾಲಯದಲ್ಲಿ ಇಂದು 18703 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು 346875 ವ್ಯಕ್ತಿಗಳಿಗೆ ತಪಾಸಣೆ ನಡೆಸಲಾಗಿದೆ. ಅಲ್ಲದೆ, 104 ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜುಗಳಲ್ಲಿ 1873 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News