ಸೌದಿಯಲ್ಲಿರುವ ಕನ್ನಡಿಗರಿಗಾಗಿ ಹೆಚ್ಚುವರಿ ವಿಮಾನ ಒದಗಿಸಲು ಕೇಂದ್ರಕ್ಕೆ ಮನವಿ: ಡಾ. ಅಶ್ವತ್ಥನಾರಾಯಣ
ಬೆಂಗಳೂರು: ಸೌದಿ ಅರೇಬಿಯಾದಿಂದ ಕರ್ನಾಟಕಕ್ಕೆ ವಾಪಸಾಗಲು ಬಯಸಿರುವ ಸುಮಾರು 2,500 ಮಂದಿಗೆ ಹೆಚ್ಚುವರಿ ವಿಮಾನಯಾನ ಸೌಕರ್ಯ ಒದಗಿಸುವ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿ, ಅಗತ್ಯ ನೆರವು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂರ್ವತಯಾರಿಯ ವೈಫಲ್ಯಗಳ ಬಗ್ಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥನಾರಾಯಣ್ ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸುಧೀರ್ಘವಾಗಿ ಚರ್ಚಿಸಿದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸರ್ಕಾರದ ಕಡೆಯಿಂದ ಆಗುವ ಎಲ್ಲ ಸಹಾಯ ಮಾಡುವುದಾಗಿ ಡಾ. ಅಶ್ವತ್ಥನಾರಾಯಣ ಆಶ್ವಾಸನೆ ನೀಡಿದರು.
ಸೌದಿ ಅರೇಬಿಯಾದಿಂದ ರಾಜ್ಯಕ್ಕೆ, ಅದರಲ್ಲೂ ವಿಶೇಷವಾಗಿ ಮಂಗಳೂರಿಗೆ ವಾಪಸಾಗಲು ಬಯಸಿರುವ 2,500 ಮಂದಿಗೆ ಹೆಚ್ಚುವರಿ ವಿಮಾನದ ವ್ಯವಸ್ಥೆ ಮಾಡಬೇಕು ಎಂಬ ಅನಿವಾಸಿ ಕನ್ನಡಿಗರ 'ಕನ್ನಡಿಗಾಸ್ ಹೆಲ್ಪ್ ಲೈನ್' ತಂಡದ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿ, "ಚಿಂತೆ ಮಾಡಬೇಡಿ. ನಿಮ್ಮ ಜತೆ ನಾವಿದ್ದೇವೆ. ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ನಿಮ್ಮ ಬೇಡಿಕೆ ಈಡೇರಿಸಲು ಎಲ್ಲ ಅಗತ್ಯ ಕ್ರಮ ವಹಿಸಲಾಗುವುದು,"ಎಂದರು.
ವಿಮಾನ ನಿಲ್ದಾಣದಲ್ಲಿ ನೀರಿನ ಮತ್ತು ಆಹಾರದ ವ್ಯವಸ್ಥೆ ಮಾಡಬೇಕು, ಗರ್ಭಿಣಿಯರ ಕ್ವಾರಂಟೈನ್ ಬಗ್ಗೆ ವಿಶೇಷ ಕಾಳಜಿ, ವಿಮಾನ ನಿಲ್ದಾಣದಿಂದ ಕ್ವಾರಂಟೈನ್ ವ್ಯವಸ್ಥೆಯಿರುವಲ್ಲಿಗೆ ಅಥವಾ ಮನೆಗೆ ಉತ್ತಮ ವಾಹನದ ವ್ಯವಸ್ಥೆ ಮಾಡಬೇಕು ಎಂದು ಉದ್ಯಮಿ ಹರೀಶ್ ಶೇರಿಗಾರ್ ಒತ್ತಾಯಿಸಿದರು.
ಗರ್ಭಿಣಿಯರು, ಹಿರಿಯರು, ವೈದ್ಯಕೀಯ ಚಿಕಿತ್ಸೆ ಪಡೆಯಲು ಬಂದಿರುವ ಅನಾರೋಗ್ಯ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಾಹಿತಿ ಮತ್ತು ಲಗೇಜು ಕಾಳಜಿ ವಹಿಸಲು ಸ್ವಯಂಸೇವಕರ ನೇಮಕ ಮಾಡಬೇಕು ಎಂದು ದುಬೈ ಅನಿವಾಸಿ ಕನ್ನಡಿಗರ ಅಧ್ಯಕ್ಷ ನವೀದ್ ಮಾಗುಂಡಿ ಮನವಿ ಮಾಡಿದರು. ಈ ಸಂದರ್ಭ ಕೆಎನ್ಆರೈ ಫೊರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಸವ ಸಮಿತಿ ದುಬೈ ಸ್ಥಾಪಕ ಮತ್ತು ಸಲಹ ಸಮಿತಿ ಸದಸ್ಯ ಚಂದ್ರಶೇಖರ್ ಲಿಂಗದಹಳ್ಳಿ, ಬಿಸಿಸಿಐ ಉಪಾಧ್ಯಕ್ಷ ಹಿದಾಯತ್ ಅಡ್ಡೂರ್ ಉಪಸ್ಥಿತರಿದ್ದರು.
ಗರ್ಭಿಣಿಯರಿಗೆ ವಿನಾಯ್ತಿ
"ವಿದೇಶದಿಂದ ವಾಪಸಾಗುವ ಗರ್ಭಿಣಿಯರ ಕೊರೊನ ಟೆಸ್ಟ್ ವರದಿ ನೆಗಟಿವ್ ಬಂದರೆ, ಅಂಥವರನ್ನು ಕ್ವಾರಂಟೈನ್‌ಗೆ ಕಳುಹಿಸದೇ ನೇರವಾಗಿ ಮನೆಗೆ ಕಳುಹಿಸಲಾಗುವುದು. ನಿರ್ದಿಷ್ಟ ಅವಧಿವರೆಗೆ ಅವರು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಈ ಸಂಬಂಧ ಸರ್ಕಾರ ಇತ್ತೀಚೇಗೆ ತನ್ನ ನಿರ್ಣಯ ಪ್ರಕಟಿಸಿದೆ," ಎಂದು ಉಪಮುಖ್ಯಮಂತ್ರಿ ಮಾಹಿತಿ ನೀಡಿದರು.
ಬಡವರಿಗೆ ಉಚಿತ ಕ್ವಾರಂಟೈನ್
ವಿದೇಶದಿಂದ ವಾಪಸಾಗುವವರಿಗೆ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಇದಕ್ಕೆ ಹಣ ಪಾವತಿಸಲಾಗದ ಬಡವರಿಗೆ ಹಾಸ್ಟೆಲ್ ಮುಂತಾದ ಕಡೆಗಳಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಏರ್‌ಪೋರ್ಟ್‌ನಲ್ಲಿ ಸೌಕರ್ಯ
ವಿಮಾನ ನಿಲ್ದಾಣದಲ್ಲಿ ಕುಡಿಯುವ ನೀರು, ಲಗೇಜ್ ನಿರ್ವಹಣೆ, ಆ್ಯಂಬುಲೆನ್ಸ್ ಮುಂತಾದ ಸೇವೆ ಒದಗಿಸುವಂತೆ ಅನಿವಾಸಿ ಕನ್ನಡಿಗರು ಬೇಡಿಕೆ ಮುಂದಿಟ್ಟಿದ್ದು, ಅವರ ಮನವಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.