ಚಿಕ್ಕಮಗಳೂರು: ಅನಾಮಧೇಯ ಸೂಟ್‍ಕೇಸ್ ಸೃಷ್ಟಿಸಿದ ಅವಾಂತರ
ಚಿಕ್ಕಮಗಳೂರು, ಮೇ 13: ನಗರದಲ್ಲಿ ಅನಾಮಧೇಯ ಸೂಟ್‍ಕೇಸ್ ಒಂದು ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಬುಧವಾರ ವರದಿಯಾಗಿದ್ದು, ಬಸವನಹಳ್ಳಿ ಮುಖ್ಯರಸ್ತೆ ಬದಿಯ ಪಾದಚಾರಿ ರಸ್ತೆಯಲ್ಲಿದ್ದ ಮರವೊಂದಕ್ಕೆ ಒರಗಿಸಿಟ್ಟಿದ್ದ ಸೂಟ್‍ಕೇಸ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯದಳದ ಸಿಬ್ಬಂದಿ ಮೂಲಕ ಪರಿಶೀಲನೆಗೊಳಪಡಿಸಿದ್ದಾರೆ.
ರಸ್ತೆ ಬದಿಯೊಂದರ ಬಳಿ ಇರುವ ಮರದ ಬುಡದಲ್ಲಿ ಅನಾಮಧೇಯ ಸೂಟ್‍ಕೇಸ್ ಒಂದು ಬುಧವಾರ ಪತ್ತೆಯಾಗಿದ್ದು, ಅನಾಮಧೇಯ ಮಹಿಳೆಯೊಬ್ಬರು ನಗರದ ಮುಖ್ಯ ರಸ್ತೆಯಲ್ಲಿ ಸೂಟ್‍ಕೇಸ್ ತಂದಿಟ್ಟು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಂಪು ಬಣ್ಣದ ಚೂಡಿದಾರ ಧರಿಸಿರುವ ಮಹಿಳೆ ನಗರದ ಬಸವನಹಳ್ಳಿ ಮುಖ್ಯರಸ್ತೆಯ ಮರದ ಕೆಳಗೆ ಸೂಟ್‍ಕೇಸ್ ಇಟ್ಟು ಹೋಗಿರುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ರಸ್ತೆ ಈ ರಸ್ತೆಯಲ್ಲಿರುವ ಹೋಟೆಲೊಂದರ ಸಿಸಿ ಟಿವಿ ಕ್ಯಾಮರದಲ್ಲಿ ಮಹಿಳೆಯ ಚಲನವಲನ ಸೆರೆಯಾಗಿದ್ದು, ಒಂದು ಕೈಯಲ್ಲಿ ಸೂಟ್ಕೇಸ್ ಹಿಡಿದಿದ್ದ ಮಹಿಳೆ ಮೊಬೈಲ್‍ನಲ್ಲಿ ಸಂಭಾಷಣೆ ನಡೆಸುತ್ತ ಬಂದು ರಸ್ತೆಯ ಪಾದಚಾರಿ ರಸ್ತೆಯಲ್ಲಿದ್ದ ಮರವೊಂದರ ಬಳಿ ಕೆಲ ಹೊತ್ತು ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಲೇ ತನ್ನ ಕೈಯಲ್ಲಿದ್ದ ಸೂಟ್‍ಕೇಸ್ ನ್ನು ಮರಕ್ಕೆ ಒರಗಿಸಿ ಇಟ್ಟಿದ್ದಾಳೆ.
ನಂತರ ಕೆಲ ನಿಮಿಷಗಳವರೆಗೆ ಮರದ ಬಳಿಯೇ ನಿಂತು ಮೊಬೈಲ್‍ನಲ್ಲಿ ಮಾತನಾಡುವ ಮಹಿಳೆ ಕ್ಷಣಮಾತ್ರದಲ್ಲಿ ಅಲ್ಲಿಂದ ಮೊಬೈಲ್‍ನಲ್ಲಿ ಮಾತನಾಡುತ್ತಲೇ ಅದೇ ರಸ್ತೆಯಲ್ಲಿ ಮುಂದಕ್ಕೆ ತೆರಳುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮರದ ಬುಡದಲ್ಲಿ ಅನಾಮಧೇಯ ಸೂಟ್‍ಕೇಸ್ ಇಟ್ಟಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಸವನಹಳ್ಳಿ ಠಾಣೆಯ ಪೊಲೀಸರು ಸೂಟ್‍ಕೇಸ್ ಅನ್ನು ಶಸಸ್ತ್ರ ಮೀಸಲು ಪಡೆಯ ಕವಾಯತು ಮೈದಾನಕ್ಕೆ ಕೊಂಡೊಯ್ದಿದ್ದು, ಸ್ಪೋಟಕ ವಸ್ತುಗಳಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪೊಲೀಸರು ಸೂಟ್‍ಕೇಸ್ ತೆರೆಯುವ ಸಾಹಸಕ್ಕೆ ಮುಂದಾಗಿಲ್ಲ. ಸೂಟ್‍ಕೇಸ್ ಒಳಗೆ ಏನಿದೆ ಎಂಬುದು ನಿಗೂಢವಾಗಿದ್ದು, ಶ್ವಾನದಳದ ಮೂಲಕ ಸೂಟ್ಕೇಸ್‍ನ್ನು ಪರೀಶಿಲಿಸಲಾಗಿದ್ದು, ಸೂಟ್‍ಕೇಸ್ ಇಟ್ಟಿರುವ ಮಹಿಳೆಯ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.
ಸೂಟ್‍ಕೇಸ್ನಲ್ಲಿ ಸ್ಪೋಟಕ ವಸ್ತುಗಳು ಇರಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳವನ್ನು ನಗರಕ್ಕೆ ಕರೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಘಟನೆಯ ಸಂಬಂಧ ತನಿಖೆಯ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಘಟನೆ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.