ದೇಶದ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿದೆ: ಎಚ್.ಡಿ.ಕುಮಾರಸ್ವಾಮಿ

Update: 2020-05-13 16:53 GMT

ಬೆಂಗಳೂರು, ಮೇ 13: ಆತ್ಮ ನಿರ್ಭರ ಭಾರತ ಆಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮೇ 12ರಂದು ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಅದರಂತೆಯೇ ಬಿಕ್ಕಟ್ಟನ್ನು ಬಿಜೆಪಿಯು ರಾಜಕೀಯದ ಅವಕಾಶವನ್ನಾಗಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಬುಧವಾರ ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ಆತ್ಮ ನಿರ್ಭರ ಭಾರತ ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕೆಂದು ಹೇಳಿ ಅನಾಥರನ್ನಾಗಿಸಲಾಗಿದೆ ಎಂದು ಹೇಳಿದ್ದಾರೆ. 

ಲಾಕ್‍ಡೌನ್‍ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ 20 ಲಕ್ಷ ಕೋಟಿ ಪ್ಯಾಕೇಜ್ ರೂಪಿಸಿರುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಆದರೆ, ಪ್ಯಾಕೇಜ್‍ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ ಎಂದು ಕಿಡಿಕಾರಿದ್ದಾರೆ. 

ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ 20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಅರಮನೆ ಕಟ್ಟಿರುವ ಕೇಂದ್ರ ಸರಕಾರ ಆ ಮೂಲಕ ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಅಲ್ಲದೆ, ಈ ಘೋಷಣೆಯ ಬಿಜೆಪಿಯು ಅಪಾರ ಪ್ರಮಾಣದ ಪ್ರಚಾರ ಪಡೆದು, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿರುವುದು ಸ್ಪಷ್ಟ ಎಂದು ತಿಳಿಸಿದ್ದಾರೆ.

ಕೊರೋನ ವೈರಸ್ ಸೋಂಕಿನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ, ತನಗಿಷ್ಟ ಬಂದ ಘೋಷಣೆಗಳನ್ನು ಕೂಗಿ 20 ಲಕ್ಷ ಕೋಟಿ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಕೇಂದ್ರ ಸರಕಾರ ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ ಎಂದಿದ್ದಾರೆ. 

20 ಲಕ್ಷ ಕೋಟಿ ಪ್ಯಾಕೇಜ್ ಎಂಬುದು ಲಿಕ್ವಿಡಿಟಿ(ನಗದು) ಆಧಾರಿತವಲ್ಲ. ಅಲ್ಲದೆ, ಇದರಿಂದ, ಜನರಿಗೆ ಕನಿಷ್ಠ ಸಹಾಯವೂ ಆಗದು. ಇದು ಕಾಲ್ಪನಿಕ ಘೋಷಣೆಗಳು ಮಾತ್ರವಾಗಿದ್ದು, ಇದರಲ್ಲಿರುವುದು ಬರೀ ಉದ್ಯಮವಾಗಿದೆ. ಆತ್ಮ ನಿರ್ಭರ ಭಾರತ ಎನ್ನುವುದೇ ನಿಮಗೆ ನೀವೇ ಆಗಬೇಕು. ನಮ್ಮಿಂದ ನಿಮಗೆ ಚಿಕ್ಕಾಸೂ ದೊರಕದು ಎಂದು ಜನರಿಗೆ ಕೇಂದ್ರ ನೀಡಿದ ಸ್ಪಷ್ಟನೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News