ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡಲು ಸಿಎಂ ಯಡಿಯೂರಪ್ಪ ಆಸಕ್ತಿ ತೋರಿದ್ದಾರೆ: ಎಚ್.ವಿಶ್ವನಾಥ್

Update: 2020-05-13 17:30 GMT

ಮೈಸೂರು,ಮೇ.13: ಹುಣಸೂರನ್ನು ಡಿ.ದೇವರಾಜು ಅರಸು ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸಕ್ತಿ ತೋರಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವರಾಜು ಅರಸು ಹೆಸರಿನಲ್ಲಿ ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡಲು ವಿಶ್ವನಾಥ್ ಯಾರು ಎಂಬ ಶಾಸಕ ಸಾ.ರಾ.ಮಹೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಗೆದ್ದವರು ಅಷ್ಟೇ ಅಲ್ಲ ಸೋತವರಿಗೂ ಜನರ ಕೆಲಸ ಮಾಡಲು ಅಧಿಕಾರ ಇದೆ. ಹುಣಸೂರನ್ನು ದೇವರಾಜು ಅರಸು ಜಿಲ್ಲೆಯನ್ನಾಗಿ ಮಾಡುವುದು ನಮ್ಮೆಲ್ಲರ ಆಶಯ. ಈ ಬಗ್ಗೆ ಸಿಎಂ ಬಳಿ ಈಗಾಗಲೇ ಮಾತನಾಡಿದ್ದೇನೆ. ಅವರು ಇದಕ್ಕೆ ಸ್ಪಂದಿಸಿದ್ದಾರೆ. ದೇವರಾಜು ಅರಸು ಹೆಸರನಲ್ಲಿ ಏನಾದರೂ ಮಾಡೋಣ ಎಂದಿದ್ದಾರೆ. ಕೊರೊನ ಮುಗಿದ ಮೇಲೆ ಈ ಬಗ್ಗೆ ಸಿಎಂ ಅವರನ್ನು ಮತ್ತೆ ಭೇಟಿಯಾಗುವೆ ಎಂದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಬಿಗಿಯಾಗಿದ್ದು, ಮುಖ್ಯಮಂತ್ರಿಗಳು ಅನವಶ್ಯಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಕೊರೊನ ಕಣ್ಗಾವಲು ಸಮಿತಿಗೆ ಐವರು ಐಎಎಸ್ ಅಧಿಕಾರಿ ಹಾಗೂ ಓರ್ವ ಐಎಫ್‍ಎಸ್ ಅಧಿಕಾರಿಯನ್ನು ನೇಮಕ ಮಾಡಿದೆ. ಆದರೆ, ಇದು ಸರಿಯಲ್ಲ. ಈ ಸಮಿತಿಯಲ್ಲಿ ವೈದ್ಯರನ್ನೊಳಗೊಂಡ ಕಮಿಟಿ ಇರಬೇಕು. ಐಎಎಸ್ ಅಧಿಕಾರಿಗಳು ಕಮಿಟಿ ಕೊರೊನ ತಡೆಗೆ ಸಲಹೆ ಕೊಡಲು ಸಾಧ್ಯವಿಲ್ಲ. ಈ ಕಮಿಟಿಗೆ ವೈದ್ಯ ತಜ್ಞರನ್ನು ನೇಮಿಸಬೇಕು ಎಂದರು.

ಮೈಸೂರು ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಕ್ರಮದ ಬಗ್ಗೆ ಸಾ.ರಾ.ಮಹೇಶ್ ಧ್ವನಿ ಎತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಗಮನ ಹರಿಸಿ ಸೂಕ್ತ ತನಿಖೆ ನಡೆಸಬೇಕೆಂದು ಇದೇ ವೇಳೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಮಹೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News