×
Ad

ಆನ್‍ಲೈನ್ ಮೂಲಕ ಮನೆ ಬಾಗಿಲಿಗೆ ಮಾವಿನ ಹಣ್ಣು

Update: 2020-05-13 23:03 IST

ಬೆಂಗಳೂರು, ಮೇ 13: ಲಾಕ್‍ಡೌನ್ ಪರಿಣಾಮ ಈ ಬಾರಿ ಮಾವು ಮೇಳವನ್ನು ಆಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಜನರ ಮನೆ ಬಾಗಿಲಿಗೆ ಪ್ಯಾಕ್ ಮಾಡಿದ ಮಾವಿನ ಹಣ್ಣನ್ನು ತಲುಪಿಸುವ ಮೂಲಕ ರೈತರಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ.  

ವಿವಿಧ ಜಿಲ್ಲೆಗಳಲ್ಲಿ ಈ ಕುರಿತ ಪ್ರಕ್ರಿಯೆ ಆರಂಭವಾಗಿವೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೊಪ್ಪಳದಲ್ಲಿ ಮೇ 15ರಿಂದ 'ಕೊಪ್ಪಳ ಮಾವು' ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದು ಕೃಷಿ ಸಚಿವ ಬಿ.ಸಿ. ಪಾಟೀಲ್ ಇದಕ್ಕೆ ಚಾಲನೆ ನೀಡಲಿದ್ದಾರೆ.

ಕೊರೋನ ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ ಈ ಬಾರಿ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜನೆ ಮಾಡಲಾಗುತ್ತಿಲ್ಲ. ಆದ್ದರಿಂದ, ತೋಟಗಾರಿಕಾ ಇಲಾಖೆ, ಬೆಂಗಳೂರಿನ ಮಾವು ಮಾರಾಟ ಮಂಡಳಿ ಸೇರಿ ಜಿಲ್ಲಾಡಳಿತದ ಸಹಕಾರದಿಂದ ಮನೆ ಬಾಗಿಲಿಗೆ ಮಾವಿನ ಹಣ್ಣು ಪೂರೈಕೆ ಮಾಡಲಿವೆ.

ಮಂಡ್ಯ ಜಿಲ್ಲೆಯಲ್ಲಿ ಮಾವಿನ ಹಣ್ಣನ್ನು ಮನೆ ಮನೆಗಳಿಗೆ ತಲುಪಿಸಲು ಆನ್‍ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಆರ್ಡರ್ ನೀಡಿದ ಒಂದೇ ದಿನದಲ್ಲಿ ಗ್ರಾಹಕರ ಮನೆಗೆ ಮಾವಿನ ಹಣ್ಣು ಸಿಗಲಿದೆ. ಸದ್ಯ, ಮಂಡ್ಯ ನಗರದಲ್ಲಿ ಮಾತ್ರ ಇದನ್ನು ಜಾರಿಗೆ ತರಲಾಗಿದೆ. ಗ್ರಾಹಕರ ಬೇಡಿಕೆಯನ್ನು ಆಧರಿಸಿ ಉಳಿದ ಕಡೆಗಳಲ್ಲೂ ಮನೆಗೆ ಮಾವನ್ನು ತಲುಪಿಸುವ ಕಾರ್ಯ ಮಾಡಳಾಗುತ್ತದೆ.
ಈ ಬಾರಿ ಮಾವು ಬೆಳೆ ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿಯೇ ಲಾಕ್‍ಡೌನ್ ಜಾರಿಗೆ ಬಂದಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಮಾವು ಮತ್ತು ಹಲಸು ಮೇಳ ಸಹ ಈ ಬಾರಿ ನಡೆಯುವ ಸಾಧ್ಯತೆಗಳಿಲ್ಲ. ಆದರೆ, ಹಾಪ್‍ಕಾಮ್ಸ್ ನ ಎಲ್ಲ ಮಳಿಗೆಗಳಲ್ಲಿ ರಿಯಾಯ್ತಿ ದರದಲ್ಲಿ ಮಾವು ಹಾಗೂ ಹಲಸು ಖರೀದಿ ಮಾಡಬಹುದಾಗಿದೆ. ಒಂದು ವೇಳೆ ಗ್ರಾಹಕರಿಂದ ಬೇಡಿಕೆ ಬಂದಲ್ಲಿ ಆನ್‍ಲೈನ್ ಮೂಲಕವೂ ಗ್ರಾಹಕರ ಮನೆ ಬಾಗಿಲಿಗೆ ಹಲಸು ಹಾಗೂ ಮಾವನ್ನು ತಲುಪಿಸುವ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂದು ಹಾಪ್‍ಕಾಮ್ಸ್ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News