ಕಾರ್ಮಿಕರಿಗೆ ಉದ್ಯೋಗ ಒದಗಿಸಲು ರಾಮನಗರ ಜಿಲ್ಲೆಯಲ್ಲಿ ವಿನೂತನ ಪ್ರಯತ್ನ

Update: 2020-05-13 18:00 GMT

ರಾಮನಗರ, ಮೇ 13: ಕೋವಿಡ್-19 ತಡೆಗಟ್ಟಲು ಲಾಕ್‍ಡೌನ್ ಜಾರಿಯಾದ ನಂತರ ಕಾರ್ಮಿಕರು ತಮ್ಮ ಮುಂದಿನ ಜೀವನದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗವನ್ನು ಕಲ್ಪಿಸಲು ರಾಮನಗರ ಜಿಲ್ಲಾಡಳಿತ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಳ್ಳುವ ವಿನೂತನ ಪ್ರಯತ್ನ ಆರಂಭಿಸಿದೆ.

ಜಿಲ್ಲೆಯಲ್ಲಿರುವ ಕಾರ್ಮಿಕರು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ತೆರಳದೆ ಇಲ್ಲೇ ಉಳಿದಿರುವ ವಲಸೆ ಕಾರ್ಮಿಕರು www.ramanagarcovid19.co.in ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಯನ್ನು ಸಂಗ್ರಹಿಸಿ ಅವಶ್ಯಕತೆ ಇರುವ ವಿಭಾಗಗಳಲ್ಲಿ ಕಾರ್ಮಿಕರಿಗೆ ಕೆಲಸ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.

ಜಿಲ್ಲೆಯಲ್ಲಿ ಕೈಗಾರಿಕೆಗಳು ಕಾರ್ಯಾರಂಭವಾಗಿದ್ದು, ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರು ತಮ್ಮ ಜಿಲ್ಲೆ ಹಾಗೂ ರಾಜ್ಯಗಳಿಗೆ ಹಿಂದಿರುಗಿರುವುದರಿಂದ ಅವರಿಗೂ ಕಾರ್ಮಿಕರ ಕೊರತೆ ಉಂಟಾಗಿರಬಹುದು. ಕೈಗಾರಿಕೆಗಳು ಸಹ ನೋಂದಣಿ ಮಾಡಿಕೊಂಡು ತಮಗೆ ಬೇಕಿರುವ ಕಾರ್ಮಿಕರ ವಿವರವನ್ನು ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಈ ಹೊಸ ವೆಬ್‍ಸೈಟ್‍ಗೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಮ್ಮ ಕಚೇರಿಯಲ್ಲಿ ಇಂದು ಚಾಲನೆ ನೀಡಿ ಜಿಲ್ಲೆಯಲ್ಲಿ ಇಂದಿನ ತುರ್ತು ಅವಧಿಯಲ್ಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಕಾರ್ಮಿಕರು ವೆಬ್‍ಸೈಟ್‍ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News