ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಹುರಾಷ್ಟ್ರೀಯ ಕಂಪೆನಿಗಳಿಂದ ರೈತರಿಗೆ ಶೋಷಣೆ: ದೇವೇಗೌಡ

Update: 2020-05-14 12:06 GMT

ಬೆಂಗಳೂರು, ಮೇ 14: "ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿಯ ಮೂಲಕ ದುರ್ಬಲಗೊಳಿಸಿದರೆ ರೈತರು ಶೋಷಣೆಗೊಳಗಾದಾಗ ಅವರಿಗೆ ಯಾವುದೇ ರಕ್ಷಣೆ ನೀಡಲು ಸಾಧ್ಯವಾಗದು" ಎಂದು ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಈ ರೀತಿ ಏಕಾಏಕಿ ತೀರ್ಮಾನ ಕೈಗೊಂಡರೆ ರೈತರು ಸಂಕಷ್ಟಕ್ಕೀಡಾಗುವರು. ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಎಪಿಎಂಸಿ ಕಾಯ್ದೆ ರೈತರಿಗೆ ತಕ್ಕ ಮಟ್ಟಿನ ರಕ್ಷಣೆ ನೀಡಿತ್ತು. ಆದರೆ, ಎಪಿಎಂಸಿಯ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಂಡವಾಳಶಾಹಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಿಂದ ರೈತರು ಶೋಷಣೆಗೊಳಗಾಗುವ ಅಪಾಯವಿದೆ' ಎಂದು ಎಚ್ಚರಿಸಿದ್ದಾರೆ.

ಇಡೀ ರಾಜ್ಯದಲ್ಲಿ ಕೊರೋನ ವಿರುದ್ಧ ಸಮರ ನಡೆಸುತ್ತಿರುವ ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರವುದು ಸರಿಯಲ್ಲ. ರೈತ ಸಮುದಾಯದ ಅಭಿಪ್ರಾಯ ಪಡೆಯದೇ ಹಾಗೂ ಈ ತಿದ್ದುಪಡಿ ಕಾಯ್ದೆಯನ್ನು ಸದನದಲ್ಲಿ ಮಂಡಿಸದೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ನಿರ್ಧಾರವನ್ನು ರಾಜ್ಯ ಸರಕಾರ ಹಿಂಪಡೆಯಬೇಕು' ಎಂದು ದೇವೇಗೌಡ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News