ರೈತರ ಬದುಕು ಅಭದ್ರಗೊಳಿಸುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಯಾದರೆ ಹೋರಾಟ: ಕುಮಾರಸ್ವಾಮಿ

Update: 2020-05-14 12:12 GMT

ಬೆಂಗಳೂರು, ಮೇ 14: ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಕುರಿತು ಇಂದು ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತಿದೆ. ರೈತರ ಬದುಕನ್ನು ಅಭದ್ರಗೊಳಿಸುವ, ಬಹುರಾಷ್ಟ್ರೀಯ ಕಂಪೆನಿಗಳ ದಾಸ್ಯಕ್ಕೆ ಒಳಪಡಿಸುವ ಈ ಸುಗ್ರೀವಾಜ್ಞೆಗೆ ಸರಕಾರ ಯಾವುದೇ ಕಾರಣಕ್ಕೂ ಮುಂದಾಗಬಾರದು. ಇದು ಕಡೆಯ ಎಚ್ಚರಿಕೆ. ಇಲ್ಲವಾದರೆ ಹೋರಾಟ ಎದುರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮೂಲಕ ಎಚ್ಚರಿಸಿದ್ದಾರೆ.

ಬಹುರಾಷ್ಟ್ರೀಯ ಕಂಪೆನಿಗಳಿಗೆ ನಮ್ಮನ್ನು ಒಪ್ಪಿಸಿಕೊಳ್ಳುವುದು ಅಪಾಯಕಾರಿ. ಅಭದ್ರತೆಯ ಈ ವ್ಯವಸ್ಥೆಗೆ ಕೃಷಿ, ರೈತರನ್ನು ಒಳಪಡಿಸುವುದು ನಮ್ಮ ಬೆನ್ನೆಲುಬನ್ನೇ ಮುರಿದಂತೆ. 20 ಲಕ್ಷ ಕೋಟಿ ರೂ. ಪ್ಯಾಕೇಜ್ ವೇಳೆ ಲೋಕಲೈಸೇಷನ್ ಬಗ್ಗೆ ಮೋದಿ ಮಾತನಾಡಿದ್ದರು. ಆದರೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರನ್ನು ಒಪ್ಪಿಸುವುದು ಯಾವ ಲೋಕಲೈಸೇಷನ್ ಎಂದು ಅವರು ಪ್ರಶ್ನಿಸಿದ್ದಾರೆ.

ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಒಂದು ವೇಳೆ ವಂಚನೆಗೊಳಗಾದರೆ ಎಪಿಎಂಸಿ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆದರೆ, ಬಹುರಾಷ್ಟ್ರೀಯ ಕಂಪೆನಿಗಳು ಮಾಡುವ ವಂಚನೆಗಳ ವಿರುದ್ಧ ನಮ್ಮ ರೈತರು ಹೋರಾಡಬಲ್ಲರೇ? ಅವರ ಕೂಟ ವ್ಯವಸ್ಥೆಯ ಎದುರು ಸೆಣಸಬಲ್ಲರೇ? ಕೃಷಿ ವ್ಯವಸ್ಥೆಗೆ ಕಾಯಕಲ್ಪ ತರಬೇಕು. ಆದರೆ, ದಾಸ್ಯಕ್ಕೊಳಪಡಿಸಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮದೆ ಹಾಗೂ ಜಂಬೂರಿನಲ್ಲಿ ಮನೆಗಳ ನಿರ್ಮಾಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಿ, ಹಣ ಒದಗಿಸಿದ್ದೆ. ಇಂದು 463 ಮನೆಗಳು ಪೂರ್ಣವಾಗಿದ್ದು, ಸಂತ್ರಸ್ತರಿಗೆ ಸೂರು ಸಿಗುತ್ತಿದೆ. ಅಂದು ಸಂತ್ರಸ್ತರ ನೋವನ್ನು ಸ್ವತಃ ನಾನೂ ಉಂಡಿದ್ದೆ. ಇಂದಿನ ಅವರ ಖುಷಿ ನನ್ನದೂ ಕೂಡ. ನಮ್ಮ ಕೆಲಸಗಳು ಮಾತಾಡಬೇಕು. ಮಾತನಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News