×
Ad

ಮಾಧ್ಯಮಗಳು ಸತ್ಯ ತಿಳಿಸುವ ಮೂಲಕ ಒಂದು ಸಮುದಾಯದ ಮೇಲಿರುವ ಅಪವಾದ ತೊಡೆದು ಹಾಕಬೇಕು

Update: 2020-05-14 18:07 IST

ತುಮಕೂರು, ಮೇ.14: ಕೋವಿಡ್-19 ಕುರಿತಂತೆ ಒಂದು ಸಮುದಾಯದವರ ಮೇಲೆ ತಪ್ಪು ಅಭಿಪ್ರಾಯ ಮೂಡುವಂತಹ ಸ್ಥಿತಿ ಉಂಟಾಗಿದ್ದು, ಈ ಅಪವಾದವನ್ನು ತೊಡೆದು ಹಾಕಲು ಮಾಧ್ಯಮಗಳು ಜನತೆಗೆ ಸತ್ಯ ತಿಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮಹಾಮಾರಿ ಕೋವಿಡ್-19 ಹರಡಲು ಒಂದು ಸಮುದಾಯ ಕಾರಣ ಎಂಬಂತಹ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಇಡೀ ಸಮುದಾಯ ತೊಂದರೆಗೆ ಒಳಗಾಗಿದೆ. ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಅಣ್ಣ,ತಮ್ಮಂದಿರಂತಿದ್ದ ಜನರು ಮಾತನಾಡಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣ ವಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಈ ಅಪವಾದವನ್ನು ಹೋಗಲಾಡಿಸಲು ಮಾಧ್ಯಮಗಳು ಸೇರಿದಂತೆ ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ಇದಕ್ಕೂ ಮೊದಲು ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಯಾರೂ ಇಂತಹ ವರ್ಗದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿರುವುದಿಲ್ಲ. ಕೋವಿಡ್ ಒಂದೇ ಸಮುದಾಯದಿಂದ ಹರಡಿಲ್ಲ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೊರೋನ ಹಿನ್ನಲೆಯಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ಮನದಲ್ಲಿಟ್ಟುಕೊಂಡು ಮುಸ್ಲಿಮರು ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ಒಂದು ವೇಳೆ ಹಬ್ಬ ಮಾಡಿದರೂ ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ಇದು ಸ್ವಾಗತಾರ್ಹ. ಆದರೆ ಒಂದು ಸಮುದಾಯವನ್ನು ಇಂತಹ ದುಸ್ಥಿತಿಗೆ ತಳ್ಳಿದ್ದು ಮಾತ್ರ ದುರದೃಷ್ಟಕರ. ನಿಮ್ಮೆಲ್ಲರ ಸಹಕಾರದಿಂದ ಈ ಅಪವಾದ ತೊಡೆದು ಹಾಕಲು ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಅಲ್ಪಸಂಖ್ಯಾತ ಮುಖಂಡರು, ರಮಝಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ಸಮುದಾಯದಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಮಾಧ್ಯಮಗಳು ಇದನ್ನೇ ದೊಡ್ಡದು ಮಾಡಿ, ಕೋವಿಡ್-19 ಹರಡಲು ಇವರೇ ಕಾರಣ ಎಂಬಂತೆ ಬಿಂಬಿಸುತ್ತವೆ. ಆದ್ದರಿಂದ ರಮಝಾನ್ ಹಬ್ಬ ಮುಗಿಯುವವರೆಗೂ ನಗರದ ಪ್ರಮುಖ ವಾಣಿಜ್ಯ ಭಾಗವಾಗಿರುವ ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ ಹಾಗೂ ಜನನಿಬೀಡ ಪ್ರದೇಶಗಳಲ್ಲಿ ಲಾಕ್‍ಡೌನ್ ಘೋಷಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಸಭೆಯಲ್ಲಿ ಮೇಯರ್ ಫರೀಧಾ ಬೇಗಂ, ಮಾಜಿ ಕಾರ್ಪೋರೇಟರ್ ಹಫೀಝ್, ವಕ್ಪ್ ಜಿಲ್ಲಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್, ಉದ್ಯಮಿ ಆಶ್ರಪ್ ಹುಸೇನ್ ಸೇರಿದಂತೆ ಹಲವರು ಭಾಗವಹಿಸಿ, ಜಿಲ್ಲಾಡಳಿತಕ್ಕೆ ಹಲವು ಸಲಹೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News