ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವ್ಯಾಪಕ ಆಕ್ರೋಶ: ತೀವ್ರ ಹೋರಾಟದ ಎಚ್ಚರಿಕೆ ನೀಡಿದ ವರ್ತಕರು

Update: 2020-05-14 14:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 14: ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ಖಂಡಿಸಿ ವಿವಿಧ ಕಡೆಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನು ಮುಚ್ಚುವ ಮೂಲಕ ತಾತ್ಕಾಲಿಕವಾಗಿ ಮುಷ್ಕರ ನಡೆಸಿ, ಸರಕಾರದ ಕ್ರಮವನ್ನು ಖಂಡಿಸಿದರು.

ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದೇ ಆದರೆ ಮೇ 18 ರಿಂದ ಅನಿರ್ದಿಷ್ಟ ಕಾಲ ರಾಜ್ಯಾದ್ಯಂತ ಎಲ್ಲಾ 177 ಎಪಿಎಂಸಿ ಮಾರುಕಟ್ಟೆಗಳ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟ ನಡೆಸಲು ಎಫ್‍ಕೆಸಿಸಿಐ ಮತ್ತು ಎಪಿಎಂಸಿ ವರ್ತಕರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ರೈತರ ಹಿತದೃಷ್ಟಿಯನ್ನು ಕಾಪಾಡುವ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮುಖಾಂತರ ಜಾರಿಗೆ ತರುವ ಪ್ರಯತ್ನದಲ್ಲಿದೆ ಎಂದು ತಿಳಿದುಬಂದಿದೆ. ಆದರೆ ಸರಕಾರವು ಇದರ ಆಗು ಹೋಗುಗಳನ್ನು ಪರಾಮರ್ಶಿಸದೇ ಆತುರದ ನಿರ್ಧಾರವನ್ನು ತರಾತುರಿಯಲ್ಲಿ, ಅದೂ ಈ ಲಾಕ್‍ಡೌನ್ ಸಂದರ್ಭದಲ್ಲಿ ತಿದ್ದುಪಡಿ ತರಲು ಉದ್ದೇಶಿಸಿರುವುದು ಅತೃಪ್ತಿಕರವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸಿ.ಆರ್. ಜನಾರ್ಧನ ತಿಳಿಸಿದ್ದಾರೆ.

ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಎಪಿಎಂಸಿ ವಲಯದ ಸಂಘ ಸಂಸ್ಥೆಗಳೊಡನೆ ಚರ್ಚಿಸದೇ ಸರಕಾರ ಏಕಾಏಕಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿರುವ ಕ್ರಮವನ್ನು ಇಡೀ ಎಪಿಎಂಸಿ ಸಮೂಹ ವಿರೋಧಿಸುತ್ತದೆ. ಇಂತಹ ನಿರ್ಧಾರವನ್ನು ಸರಕಾರ ತೆಗೆದುಕೊಂಡಲ್ಲಿ ರಾಜ್ಯದ 177 ಎಪಿಎಂಸಿ ಮಾರುಕಟ್ಟೆಗಳು ತನ್ನ ಸಂಪೂರ್ಣ ಚುಟುವಟಿಕೆಗಳನ್ನು ಸ್ಥಗಿತಗೊಳಿಸುವುದರ ಜತೆಗೆ ಈ ವ್ಯಾಪ್ತಿಯಲ್ಲಿ ಬರುವ 20 ಲಕ್ಷಕ್ಕೂ ಹೆಚ್ಚು ಅವಲಂಬಿತರು ಹಾಗೂ ಎಫ್‍ಕೆಸಿಸಿಐ ಮಹಾಸಂಸ್ಥೆಯು ಜತೆಗೂಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ರೈತರ ಹೊಟ್ಟೆ ಮೇಲೆ ಹೊಡೆಯಬೇಕೆ? ಎಪಿಎಂಸಿಯಲ್ಲಿ ಇದೀಗ ಒಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಅದನ್ನು ಹಾಳು ಮಾಡಿ ಕಾರ್ಪೋರೇಟ್ ಸಂಸ್ಥೆಗಳ ಪರ ನಿಲ್ಲುವುದು ಸರಿಯಲ್ಲ. ಇದು ರೈತರಿಗೆ ದೊಡ್ಡ ಮಾರಕವಾಗಲಿದೆ ಎಂದು ಹೈ-ಕ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಅಮರನಾಥ ಪಾಟೀಲ್ ಹೇಳೀದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News