ಮಂಗಳೂರಿನಲ್ಲಿ 445 ಕೋಟಿ ರೂ. ವೆಚ್ಚದಲ್ಲಿ 'ಸಮಗ್ರ ಸಾರ್ವಜನಿಕ ಸಾರಿಗೆ ಕೇಂದ್ರ' ನಿರ್ಮಾಣ

Update: 2020-05-14 17:30 GMT

ಬೆಂಗಳೂರು, ಮೇ 14: ಮಂಗಳೂರಿನ ಪಂಪ್‍ವೆಲ್ ವೃತ್ತದ ಸಮೀಪ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ಒಟ್ಟು 445 ಕೋಟಿ ರೂಪಾಯಿ ವೆಚ್ಚದಲ್ಲಿ 'ಸಮಗ್ರ ಸಾರ್ವಜನಿಕ ಸಾರಿಗೆ ಕೇಂದ್ರ' ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಂಡಿದ್ದು, ಮಂಗಳೂರು ನಗರದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.

ಉದ್ದೇಶಿತ ಅತ್ಯಾಧುನಿಕ ಬಸ್ ನಿಲ್ದಾಣ ಕೇಂದ್ರದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಕಚೇರಿ, ಬಹುಮಹಡಿ ವಾಹನ ನಿಲ್ದಾಣ, ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಇದಕ್ಕೆ ರಾಜ್ಯ ಸರಕಾರ ಯಾವುದೇ ಹಣ ನೀಡುವುದಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ನಿಲ್ದಾಣ ನಿರ್ಮಿಸಿ ಆ ಬಳಿಕ ಸರಕಾರಕ್ಕೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮಕ್ಕೆ ಅನುಮೋದನೆ: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ) ಅಧಿನಿಯಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವಲಯ ಮಟ್ಟದಲ್ಲಿ ವರ್ಗಾವಣೆ ಮಾಡಲು ಮತ್ತು ಶಿಕ್ಷಕಿಯರ ವರ್ಗಾವಣೆಗೆ ಕೆಲ ವಿನಾಯಿತಿ ನೀಡುವ ಸಂಬಂಧ ಈಗಾಗಲೇ ಅಧಿವೇಶನದಲ್ಲಿ ಅನುಮೋದನೆ ಪಡೆದಿದ್ದ ಮಸೂದೆಗೆ ಇದೀಗ ಒಪ್ಪಿಗೆ ನೀಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಸಿ ಮತ್ತು ಡಿ ವೃಂದದ ಸಿಬ್ಬಂದಿ ನೇಮಕಾತಿಗೆ ವೃಂದ ಮತ್ತು ನೇಮಕಾತಿ ನೀತಿ ರೂಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥಗಳು, ಸಮವಸ್ತ್ರ ಮತ್ತು ಶುಚಿ ಸಂಭ್ರಮ ಕಿಟ್‍ಗಳನ್ನು ಖರೀದಿಸಲು 260 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News