ಹೈದರಾಬಾದ್ ನ ಖಾಸಗಿ ಕಂಪೆನಿ ಪಾಲಾದ ರಾಯಚೂರು ವೈಟಿಪಿಎಸ್ ನಿರ್ವಹಣೆ
ರಾಯಚೂರು, ಮೇ 14: ರಾಯಚೂರು ತಾಲೂಕಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ(ವೈಟಿಪಿಎಸ್)ದ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ವಿದ್ಯುತ್ ನಿಗಮವು 30 ತಿಂಗಳ ಅವಧಿಗೆ ಹೈದರಾಬಾದ್‍ನ ಪವರ್ ಮೇಕ್ ಖಾಸಗಿ ಕಂಪೆನಿಗೆ ವಹಿಸಿದೆ.
ಒಪ್ಪಂದದ ಆಧಾರದಲ್ಲಿ ಪವರ್ ಮೇಕ್ ಕಂಪೆನಿಯೇ ಕಾರ್ಮಿಕರು-ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ವಿದ್ಯುತ್ ಉತ್ಪಾದನೆಯ ಸಂಪೂರ್ಣ ಹೊಣೆ ಈ ಕಂಪೆನಿಯದ್ದಾಗಿದೆ. ಕಲ್ಲಿದ್ದಲು ಖರೀದಿ, ಮೇಲುಸ್ತುವಾರಿ ಹಾಗೂ ವಿದ್ಯುತ್ ಮಾರಾಟದ ಜವಾಬ್ದಾರಿಯನ್ನು ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ನೋಡಿಕೊಳ್ಳಲಿದೆ. ಈಗಾಗಲೇ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ.
2,500 ಎಕರೆ ಭೂಮಿಯಲ್ಲಿ 1,300 ಕೋಟಿ ವೆಚ್ಚದಲ್ಲಿ ಈ ಸ್ಥಾವರ ಸ್ಥಾಪಿಸಿದ್ದು, 2017ರಿಂದ ಕಾರ್ಯಾರಂಭ ಮಾಡಿದೆ. ತಲಾ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಎರಡು ಘಟಕಗಳು ಇವೆ.
ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ 300 ಕಾರ್ಮಿಕರನ್ನು ಈ ಹಿಂದೆಯೇ ತೆಗೆದು ಹಾಕಲಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‍ಟಿಪಿಎಸ್)ದ ಕೆಲ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಗೆ ಬಂದಾಗ ಕೆಲಸ ಕಳೆದುಕೊಂಡಿದ್ದ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿ, ಸಂಚಾರಕ್ಕೆ ಅಡ್ಡಿಪಡಿಸಿದ್ದು ಸುದ್ದಿಯಾಗಿತ್ತು.