ಗಗನಕ್ಕೇರಿದ ಕಟ್ಟಡ ಸಾಮಗ್ರಿಗಳ ಬೆಲೆ, ಕಾರ್ಮಿಕರ ಕೂಲಿ: ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತ ಸಾಧ್ಯತೆ

Update: 2020-05-15 18:09 GMT

ಬೆಂಗಳೂರು, ಮೇ 15: ಕಳೆದ 50 ದಿನಗಳ ಲಾಕ್‍ಡೌನ್‍ನಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ತೀವ್ರ ಅಸಮತೋಲನ ಸೃಷ್ಟಿಯಾಗಿದ್ದು, ಕಟ್ಟಡ ಸಾಮಗ್ರಿಗಳ ಬೆಲೆ ಹಾಗೂ ಕಾರ್ಮಿಕ ಕೂಲಿ ಗಗನಕ್ಕೇರುತ್ತಿವೆ.

ಮೇ 4 ರಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳು ಗರಿಗೆದರಿದ್ದು, ಬೇಡಿಕೆಯಲ್ಲಿ ತೀವ್ರ ಹೆಚ್ಚಳ ಕಂಡುಬರುತ್ತಿವೆ. ಆದರೆ ಸರಕುಗಳ ತಯಾರಿಕೆ ಹಾಗೂ ಸಾಗಾಣಿಕೆ ಸ್ತಬ್ಧಗೊಂಡಿರುವುದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗದೇ ಸರಕುಗಳ ಬೆಲೆಯನ್ನು ಏಕಾಏಕಿ ಹೆಚ್ಚಿಸಲಾಗಿದ್ದು, ಕಟ್ಟಡ ನಿರ್ಮಾಣ ಇನ್ನೂ ಗಗನಕುಸುಮವಾಗಲಿದೆ.

ಕಳೆದ ಒಂದು ವಾರದಲ್ಲಿ ಸಿಮೆಂಟ್ ದರ ಮೂಟೆಯೊಂದಕ್ಕೆ ರೂ. 50ರಿಂದ ರೂ. 70ರಷ್ಟು ಹೆಚ್ಚಾಗಿದೆ. ಸಗಟು ಖರೀದಿಯಲ್ಲಿ ರೂ. 45 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸ್ಟೀಲ್ ಸಹ ಏಕಾಏಕಿ ಶೇ. 15 ರಿಂದ ಶೇ. 20ರಷ್ಟು ಹೆಚ್ಚಾಗಿದೆ.

ಸೀಮೆಂಟ್ ದರದಲ್ಲಿ ಹೆಚ್ಚಳವಾಗಿದ್ದರಿಂದ ಸಿಮೆಂಟ್ ಇಟ್ಟಿಗೆ ದರದಲ್ಲೂ ರೂ. 3 ರಿಂದ ರೂ. 5ಕ್ಕೆ ಹೆಚ್ಚಾಗಿದೆ. ಇದರ ಜೊತೆಗೆ ಅಂತರ್ ರಾಜ್ಯ ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ನದಿ ಮರಳು ಬೆಲೆಯಲ್ಲಿ ಶೇ. 20ರಷ್ಟು ಹೆಚ್ಚಳ ಮಾಡಲಾಗಿದೆ.

ಏಕಾಏಕಿ ಲಾಕ್‍ಡೌನ್‍ನಿಂದಾಗಿ ವಲಸೆ ಕಾರ್ಮಿಕರು ತಮ್ಮ ತವರು ಜಿಲ್ಲೆ, ರಾಜ್ಯಗಳಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಎಮ್ ಸ್ಯಾಂಡ್ (ಮರಳು) ಕ್ರಷರ್ ಆಪರೇಟರ್ ಮಾಡುವವರ ಕೊರತೆ ಉಲ್ಬಣಗೊಂಡಿದ್ದು, ಎಮ್ ಸ್ಯಾಂಡ್ ಸಹ ಶೇ.10 ರಷ್ಟು ಹೆಚ್ಚಾಗಿದೆ.

ಬಹುತೇಕ ಕಟ್ಟಡ ಸಾಮಗ್ರಿಗಳನ್ನು ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಟೈಲ್ಸ್ ಗಳನ್ನು ಸ್ನಾನದ ಗೃಹ ಪರಿಕರಗಳು, ನಲ್ಲಿಗಳು ಹಾಗೂ ಕಟ್ಟಡ ಆಲಂಕಾರಿಕ ವಸ್ತುಗಳನ್ನು ಲ್ಯಾಮಿನೇಟ್‍ಗಳನ್ನು ಗುಜರಾತನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಲೆಕ್ಟ್ರಿಕಲ್ ವಸ್ತುಗಳನ್ನು, ಕಬ್ಬಿಣದ ಸಾಮಗ್ರಿಗಳನ್ನು, ಮರದ ಸಾಮಗ್ರಿಗಳನ್ನು ಹೆಚ್ಚಾಗಿ ಮಹಾರಾಷ್ಟ್ರದಿಂದ ತರಿಸಲಾಗುತ್ತಿತ್ತು.

ಈ ಎರಡು ರಾಜ್ಯಗಳಲ್ಲಿ ಕೊರೋನ ಸೋಂಕು ಹೆಚ್ಚಾಗಿರುವುದರಿಂದ ಕಠಿಣ ಲಾಕ್‍ಡೌನ್ ಜಾರಿಯಲ್ಲಿದೆ. ಹೀಗಾಗಿ ಕಟ್ಟಡ ಸಾಮಗ್ರಿಗಳ ತಯಾರಿಕೆ ಸಂಪೂರ್ಣ ನಿಂತುಹೋಗಿದ್ದು, ಪೂರ್ಣ ಪ್ರಮಾಣದ ಪುನರಾರಂಭಕ್ಕೆ ಕನಿಷ್ಠ ಇನ್ನೆರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯ ವಿತರಕರು ಹಾಗೂ ಅಂಗಡಿ ಮಾಲಕರು ಹಾಲಿ ಇರುವ ದಾಸ್ತಾನುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ರಿಯಾಯತಿ  ದರದಲ್ಲಿ ಮಾರಾಟವನ್ನು ನಿಲ್ಲಿಸಿರುವ ವಿತರಕರು ಎಂಆರ್‍ಪಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಹರಸಾಹಸಪಡುತ್ತಿರುವ ಮಾಲಕರಿಗೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಮುಂದಿನ ಒಂದೆರಡು ವಾರದಲ್ಲಿ ಕಟ್ಟಡ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಇದೆ. ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರು ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಿರುವ ಹಿನ್ನೆಲೆಯಲ್ಲಿ ತೀವ್ರ ಕಾರ್ಮಿಕರ ಕೊರತೆ ಉಂಟಾಗಿದೆ. ಇದರಿಂದ ಹಾಲಿ ಇರುವ ಕಟ್ಟಡ ಕಾರ್ಮಿಕರ ಕೂಲಿಯನ್ನು ಗಣನೀಯ ಏರಿಕೆಯಾಗಿದೆ.

ಕಳೆದ 1 ವಾರದಲ್ಲಿ ನೇಷನ್ ಕೂಲಿ ರೂ. 200 ರಿಂದ 250 ಹೆಚ್ಚಾಗಿದೆ. ಹೆಲ್ಪರ್ ಗಳ ಕೂಲಿ ರೂ. 100 ರಿಂದ 150 ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನೇಷನ್ ಗಳ ಕೂಲಿ 1500 ರೂ. ವರೆಗೆ ಹೆಚ್ಚುವ ಸಾಧ್ಯತೆಯಿದೆ. ಹಾಲಿ ಕೂಲಿ ದಿನಕ್ಕೆ ರೂ. 800 ರೂ. 900 ಇದೆ. ಒಟ್ಟಾರೆ ಮುಂದಿನ ಆರೆಂಟು ತಿಂಗಳ ಕಾಲ ಕಟ್ಟಡ  ನಿರ್ಮಾಣದ ಹೆಚ್ಚಾದಲ್ಲಿ ಕನಿಷ್ಠ ಶೇ. 30 ರಷ್ಟು ಹೆಚ್ಚಾಗಲಿದ್ದು, ಮಾಲಕರ ಕಿಸೆಗೆ ದೊಡ್ಡ ಕತ್ತರಿಯೇ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News