×
Ad

ಮೈಸೂರಿನ 82% ಕೊರೋನ ಪ್ರಕರಣ ತಂದ ಜುಬಿಲಂಟ್ ಗೆ ಸೋಂಕು ತಲುಪಿಸಿದ ಮೂಲ ಯಾವುದು ?

Update: 2020-05-16 09:02 IST

ಪ್ರಕರಣ 1 : ಮಾರ್ಚ್ 13 ರಂದು ದಿಲ್ಲಿ ಸರಕಾರ ಸಾರ್ವಜನಿಕ ಸಮಾವೇಶಕ್ಕೆ ನಿರ್ಬಂಧ ವಿಧಿಸಿದ ಮೇಲೂ ದಿಲ್ಲಿಯ ತಬ್ಲೀಗಿ ಜಮಾಅತ್ ಪ್ರಧಾನ ಕಚೇರಿಯಲ್ಲಿ  ಜನರು ಎಂದಿನಂತೆ ಸೇರಿದ್ದರು.  ಅಲ್ಲಿಂದಲೇ  ಕೊರೋನ ವೈರಸ್ ದೇಶಾದ್ಯಂತ ಹರಡಿತು ಎಂದು ಹೆಚ್ಚಿನ ಟಿವಿ ಚಾನಲ್ ಗಳು ತೀರ್ಪು ಕೊಟ್ಟವು. ಇದಕ್ಕೆ ತಬ್ಲೀಗಿ ವೈರಸ್, ಜಿಹಾದ್ ವೈರಸ್ ಮತ್ತಿತರ ಹೆಸರುಗಳನ್ನೂ ನೀಡಲಾಯಿತು.  ಈ ತೀರ್ಪಿಗೆ ತಗುಲಿದ್ದು ಕೆಲವೇ ಕೆಲವು ಗಂಟೆಗಳು. ಇದಾಗಿ ವಾರದೊಳಗೆ ಅಂದರೆ  ಮಾರ್ಚ್ 30 ಕ್ಕೆ  ತಬ್ಲೀಗಿ ಜಮಾಅತ್ ವಿರುದ್ಧ ಪ್ರಕರಣ ದಾಖಲಾಯಿತು, ಮಾರ್ಚ್ 31ಕ್ಕೆ ಎಫ್ ಐ ಆರ್ ಆಯಿತು. ತಬ್ಲೀಗಿ ವೈರಸ್ ಒಂದೆರಡು ದಿನಗಳೊಳಗೆ ರಾಷ್ಟ್ರೀಯ ಇಶ್ಯೂ ಆಯಿತು.  ಹಿಂದಿ, ಇಂಗ್ಲಿಷ್, ಕನ್ನಡ ಎಲ್ಲ ಚಾನಲ್ ಗಳಲ್ಲೂ ತಬ್ಲೀಗಿಗಳದ್ದೇ ಚರ್ಚೆ.

ಪ್ರಕರಣ 2 : ಎಪ್ರಿಲ್ 1 ರಂದು ಮೈಸೂರು ದೇಶದ 25 ಹಾಟ್ ಸ್ಪಾಟ್ ಗಳ ಪಟ್ಟಿಗೆ ಸೇರಿತು. ಆಗ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಒಟ್ಟು 90 ಕೊರೋನ ಪ್ರಕರಣಗಳ ಪೈಕಿ 74 ಪ್ರಕರಣಗಳ (82.2%) ಮೂಲ ಒಂದೇ ಆಗಿತ್ತು. ಅದು - ನಂಜನಗೂಡಿನಲ್ಲಿರುವ ಜುಬಿಲಂಟ್ ಜೆನೆರಿಕ್ಸ್ ಎಂಬ ಔಷಧಗಳ ಕಂಪೆನಿ.

ಎಪ್ರಿಲ್ 24 ರಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನೀಡಿದ ಆದೇಶದಲ್ಲಿರುವ ಮಾಹಿತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಕೊರೋನ ಸೋಂಕು ಹರಡಲು ಮೂಲ ಕಾರಣ ಈ ಜುಬಿಲಂಟ್ ಕಂಪೆನಿ.  ಆದರೆ ನೀವು ಎಷ್ಟು ಬಾರಿ ಈ ಜುಬಿಲಂಟ್ ಕಂಪೆನಿ ಹೆಸರನ್ನು ಕನ್ನಡದ ಪ್ರಮುಖ ಪತ್ರಿಕೆಗಳ ಮುಖಪುಟಗಳ ಬ್ಯಾನರ್ ಹೆಡ್ ಲೈನ್ ಗಳಲ್ಲಿ ನೋಡಿದ್ದೀರಿ ? ಎಷ್ಟು ಬಾರಿ ಈ ಕಂಪೆನಿಯನ್ನು ತೋರಿಸಿ " ನೋಡಿ, ಇದೇ ಇಡೀ ಮೈಸೂರಿಗೆ ಕೊರೋನ ಹರಡಿದ ಕಂಪೆನಿ " ಎಂದು ಕನ್ನಡ 'ನ್ಯೂಸ್'  ಚಾನಲ್ ಗಳ ಆಂಕರ್ ಗಳು ಆರ್ಭಟಿಸುವುದನ್ನು ನೋಡಿದ್ದೀರಿ ? ಇಲ್ಲ, ಅಂತಹದ್ದು ನೋಡಿದ ನೆನಪಾಗುತ್ತಿಲ್ಲವೇ ? ಇಲ್ಲ ಬಿಡಿ, ನಿಮ್ಮ ತಪ್ಪಲ್ಲ, ನೀವು ಮರೆತಿಲ್ಲ. ಬಂದಿದ್ದರೆ ತಾನೇ ಮರೆಯಲು ಸಾಧ್ಯ ? ಜುಬಿಲಂಟ್ ಕಂಪೆನಿ ಬಹುತೇಕ ಯಾವ ಪತ್ರಿಕೆಗಳ ಮುಖಪುಟ ಸುದ್ದಿಯೂ ಆಗಲಿಲ್ಲ, ಯಾವ ಕನ್ನಡ ಚಾನಲ್ ಗಳ ಬಿಸಿಬಿಸಿ ಚರ್ಚೆಯ ವಸ್ತುವೂ ಆಗಲಿಲ್ಲ.

ಅಷ್ಟೇ ಅಲ್ಲ, ಮಾರ್ಚ್ 26 ಕ್ಕೆ ಜುಬಿಲಂಟ್ ನ ಮೊದಲ ಉದ್ಯೋಗಿ ಕೊರೋನ ಪಾಸಿಟಿವ್ ಆಗಿ ಇವತ್ತಿಗೆ 51 ದಿನಗಳಾದರೂ ಆತನಿಗೆ ಆ ಸೋಂಕನ್ನು ಕೊಟ್ಟವರು ಯಾರು ಎಂಬುದು ಇನ್ನೂ ನಿಗೂಢವಾಗಿದೆ. ಈ 51 ದಿನಗಳ ಬಳಿಕವೂ ಜುಬಿಲಂಟ್ ಕಂಪೆನಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 

ತಬ್ಲೀಗಿ ಜಮಾಅತ್ ಇಡೀ ದೇಶದಲ್ಲಿ ಭಯಂಕರ ' ಫೇಮಸ್ ' ಆಗಿದ್ದರೂ ಮೈಸೂರಿನ ಈ  ಕಂಪೆನಿಗೆ ಮಾತ್ರ ಈ 'ಪ್ರಚಾರದ' ಭಾಗ್ಯ ಸಿಗಲಿಲ್ಲ. ಅದರ ಹೆಸರು ನಂಜನಗೂಡು, ಮೈಸೂರು, ಹೆಚ್ಚೆಂದರೆ ಬೆಂಗಳೂರು ದಾಟಿ ಹೊರಗೆ ಹೋಗಲೇ ಇಲ್ಲ. ಎಂಥಾ ದೌರ್ಭಾಗ್ಯ ನೋಡಿ ಈ ಕಂಪೆನಿಯದ್ದು.

ಅಂದ ಹಾಗೆ ಈ ಜುಬಿಲಂಟ್ ಕಂಪೆನಿ ಪ್ರಚಾರದಲ್ಲಿ ಇರಲೇ ಇಲ್ಲ ಎಂದಲ್ಲ. ಶ್ವಾಸಕೋಶದ ನಾಳಗಳಲ್ಲಿ ಆಗುವ ಸೋಂಕಿಗೆ ( ಕೊರೋನ ಸಹಿತ) ನೀಡುವ ಔಷಧಗಳ ಪದಾರ್ಥಗಳನ್ನು  ತಯಾರಿಸುವ ಈ ಕಂಪೆನಿ ಇತ್ತೀಚಿಗೆ ಕೊರೋನಗೆ ಸಂಭಾವ್ಯ ಔಷಧಿಯಾಗಲಿರುವ Remdesivir ತಯಾರಿಕೆಗೆ ಅಮೇರಿಕ ಕಂಪೆನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಸುದ್ದಿ ಹಿಂದುಸ್ಥಾನ್ ಟೈಮ್ಸ್ ಸಹಿತ ಎಲ್ಲ ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಓ , ಹಿಂದುಸ್ಥಾನ್ ಟೈಮ್ಸ್ ಹೆಸರು ಹೇಳಿದೇವಾ .. ಹೌದೌದು, ಹಿಂದುಸ್ಥಾನ್ ಟೈಮ್ಸ್ ನಲ್ಲೂ ಸುದ್ದಿ ಬಂದಿತ್ತು ಎಂದು ಏಕೆ ಹೇಳಿದೆ ಎಂದರೆ ಈ ಹಿಂದುಸ್ಥಾನ್ ಟೈಮ್ಸ್ ನ ಮಾಲಕ ಕಂಪೆನಿ ಎಚ್ ಟಿ ಮೀಡಿಯಾದ ಅಧ್ಯಕ್ಷೆ ಶೋಭನಾ ಭಾರತೀಯ ಅವರು ಈ ಜುಬಿಲಂಟ್ ಜೆನೆರಿಕ್ಸ್ ಕಂಪೆನಿಯ ಮಾತೃ ಕಂಪೆನಿ ಜುಬಿಲಂಟ್ ಲೈಫ್ ಸೈನ್ಸಸ್ ನ ಸ್ಥಾಪಕ ಶ್ಯಾಮ್ ಎಸ್ ಭಾರತೀಯ ಅವರ ಪತ್ನಿ. ಅಂದ ಹಾಗೆ, ಶೋಭನಾ ಹಾಗು ಹಿಂದುಸ್ಥಾನ್ ಟೈಮ್ಸ್ ಗೆ ಈ ಜುಬಿಲಂಟ್ ಕಂಪೆನಿ ಜೊತೆ ಯಾವುದೇ ಸಂಬಂಧವಿಲ್ಲ. ಆದರೆ ಶೋಭನಾ ಮತ್ತು ಶ್ಯಾಮ್ ಅವರ ಪುತ್ರ ಪ್ರಿಯಂವ್ರತ ಭಾರತೀಯ ಎಚ್ ಟಿ ಮೀಡಿಯಾ ಹಾಗು ಜುಬಿಲಂಟ್ ಲೈಫ್ ಸೈನ್ಸಸ್ ಈ ಎರಡೂ ಕಂಪೆನಿಗಳ ನಿರ್ದೇಶಕ , ಅಷ್ಟೇ. 

ಅಂದ ಹಾಗೆ, ಹಿಂದುಸ್ಥಾನ್ ಟೈಮ್ಸ್ ಸಂಪಾದಕ ಆರ್  ಸುಕುಮಾರ್ ಅವರು ಕಳೆದ 50 ದಿನಗಳಿಂದ ಸತತವಾಗಿ ಪ್ರತಿದಿನ ‘COVID-19: What you need to know today' ( ಕೋವಿಡ್ ೧೯ :  ಇಂದು ನಿಮಗೆ ತಿಳಿದಿರಬೇಕಾದ ವಿಷಯಗಳು) ಎಂಬ ಅಂಕಣ ಬರೆಯುತ್ತಿದ್ದಾರೆ. ಆದರೆ ಈ 50 ದಿನಗಳಲ್ಲಿ ಒಮ್ಮೆಯೂ ಈ ಮೂರು ಪದಗಳನ್ನು ಅವರ ಅಂಕಣದಲ್ಲಿ ಅವರು ಉಲ್ಲೇಖಿಸಲೇ ಇಲ್ಲ . ಆ ಮೂರು ಪದಗಳು ಯಾವುದು ಎಂದು ಹೇಳಿದರೆ  ನಿಮಗೆ ಬಹುಮಾನ ಕೊಡಬೇಕಾ ? ಅವು Jubilant Generics, Nanjangud. 

ಈ ಜುಬಿಲಂಟ್ ಬಗ್ಗೆ ಯಾವ ಮಾಧ್ಯಮಗಳೂ ಏನೂ ಹೇಳಲೇ ಇಲ್ಲ ಎಂದಲ್ಲ. ಅಲ್ಲಿ ಇಲ್ಲಿ ಕೆಲವು ಸ್ಥಳೀಯ, ಪ್ರಾದೇಶಿಕ ಮಾಧ್ಯಮಗಳು  ಈ ಬಗ್ಗೆ ವರದಿಗಳನ್ನು ಪ್ರಕಟಿಸಿದವು.  ಆದರೆ ತಬ್ಲೀಗಿಗಳಿಗೆ ಸಿಕ್ಕಿದ ಭಾಗ್ಯದ ಒಂದೇ ಒಂದಂಶ ಈ ಜುಬಿಲಂಟ್ ಪಾಲಿಗೆ ಬರಲಿಲ್ಲ.  ಬದಲಿಗೆ ಕಂಪೆನಿಗೆ ಸಿಗುವ ಪ್ರಚಾರವನ್ನು ಆದಷ್ಟು ಕಡಿಮೆ ಮಾಡಲು ಬೇರೆ ಬೇರೆ ಕಡೆಗಳಿಂದ ಸಾಕಷ್ಟು ಶ್ರಮ ಹಾಕಲಾಯಿತು.

ರಾಜ್ಯ ಬಿಜೆಪಿ ಸರಕಾರದ ಮೂವರು ಸಚಿವರು ಈ ಜುಬಿಲಂಟ್ ನಿಂದ ಹರಡಿದ ವೈರಸ್ ಗೆ ಮೂರು ಬೇರೆ ಬೇರೆಯೇ ' ಮೂಲ ' ತೋರಿಸಿದರು. ಈ 'ಮೂಲ ' ಹುಡುಕಲೆಂದೇ ಸರಕಾರ ನೇಮಿಸಿದ ಐಎಎಸ್ ಅಧಿಕಾರಿ ಮೊದಲು ಸರಕಾರಿ ಇಲಾಖೆಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ದೂರಿದರು, ಕೊನೆಗೆ " ಈಗ ಅದನ್ನು ಹುಡುಕಿದರೂ ಏನು ಪ್ರಯೋಜನ ?' ಎಂದು ಅವರೇ ಕೇಳುತ್ತಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕರೇ ಈ ಪ್ರಕರಣವನ್ನು ಮುಗಿಸಿ ಬಿಡಲು ದಿಲ್ಲಿಯಿಂದಲೇ ಭಾರೀ ಒತ್ತಡ ಇದೆ ಎಂದು ಹೇಳಿದ್ದಾರೆ. ಕೊನೆಗೆ ರಾಜ್ಯ ಸರಕಾರದಲ್ಲೂ ಇದು ತಿಕ್ಕಾಟಕ್ಕೆ ಕಾರಣವಾಗಿದೆ. ಜುಬಿಲಂಟ್ ನ ಆಡಳಿತ ನಿರ್ದೇಶಕ ( ಶ್ಯಾಮ್ ಭಾರತೀಯ) ರನ್ನು ವಿಚಾರಣೆಗೆ ಕರೆಸುತ್ತೇವೆ ಎಂದು ಹೇಳಿದ ಬೆನ್ನಿಗೇ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣರನ್ನೇ ಎತ್ತಂಗಡಿ ಮಾಡಲಾಯಿತು. ಸ್ಥಳೀಯ ಬಿಜೆಪಿ ಶಾಸಕ ಹಾಗು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಜಟಾಪಟಿಗೂ ಜುಬಿಲಂಟ್ ಕಾರಣವಾಯಿತು.  ಜುಬಿಲಂಟ್ ತನ್ನ ನಿರ್ದೇಶಕರೊಬ್ಬರು ರಾಜೀನಾಮೆ ನೀಡಿದ್ದು ಅವರ ಜಾಗಕ್ಕೆ ಇನ್ನೊಬ್ಬರು ಬಂದಿದ್ದಾರೆ ಎಂದು ಸಿಂಗಾಪುರ ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಿತು. ಅದಕ್ಕೂ ಮೈಸೂರು ಪ್ರಕರಣಕ್ಕೆ ಸಂಬಂಧ ಇಲ್ಲದೆಯೇ ಇರಬಹುದು.  

ಅಂದ ಹಾಗೆ, ಹಿಂದುಸ್ಥಾನ್ ಟೈಮ್ಸ್ ಮಾಲಕಿ ಶೋಭನಾ ಭಾರತೀಯ ಮಾಜಿ ರಾಜ್ಯಸಭಾ ಸದಸ್ಯೆ. ಆಕೆಗೆ ಆ ಸ್ಥಾನ ನೀಡಿದ್ದು ಕಾಂಗ್ರೆಸ್ ಸರಕಾರ. ಹಾಗೆಯೇ ಜುಬಿಲಂಟ್ ಭಾರತೀಯ ಕಂಪೆನಿ ಎಪ್ರಿಲ್ 24 ರಂದು ಪಿಎಂ ಕೇರ್ಸ್ ಫಂಡ್ ಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಗಡಿಬಿಡಿ ಮಾಡಬೇಡಿ, ಇದು ಮಾಹಿತಿಗಾಗಿ ಅಷ್ಟೇ.

ಜುಬಿಲಂಟ್ ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳಿವೆ : 

ಲೆಟರ್ ಹೆಡ್ ಇಲ್ಲದ, ಅಧಿಕೃತ ಇಮೇಲ್ ಐಡಿ ಇಲ್ಲದ ಜಿಮೇಲ್ ಇಮೇಲ್ ಒಂದರ ಮೂಲಕ ಪಬ್ಲಿಕ್ ರಿಲೇಷನ್ ಕಂಪೆನಿಯೊಂದು ಜುಬಿಲಂಟ್ ಪರವಾಗಿ ಒಂದು ಪ್ರಕಟಣೆ ಕಳಿಸುತ್ತದೆ. ಅದರ ಪ್ರಕಾರ ಮಾರ್ಚ್ 20 ರಂದು ಬೆಳಗ್ಗೆ 11 ಗಂಟೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ ಜುಬಿಲಂಟ್ ಜೆನೆರಿಕ್ಸ್ ನ ಉದ್ಯೋಗಿಯೊಬ್ಬನಿಗೆ ಐದು ದಿನಗಳ ಬಳಿಕ ಅಂದರೆ ಮಾರ್ಚ್ 26 ರಂದು ಕೊರೊನ ಪಾಸಿಟಿವ್ ಬಂದಿದೆ. ಆದರೆ ಸಚಿವ ಸುರೇಶ ಕುಮಾರ್ ಅವರು ನೀಡಿದ ಅಧಿಕೃತ ಮಾಹಿತಿ ಪ್ರಕಾರ ಈ ಉದ್ಯೋಗಿಗೆ ಮಾರ್ಚ್ 13ಕ್ಕೇ ರೋಗ ಲಕ್ಷಣಗಳು ಕಾಣಿಸಿದ್ದವು. ಅಂದರೆ ಜುಬಿಲಂಟ್ ಹೇಳಿಕೆಯ ಮಾಹಿತಿಗೂ ಸಚಿವರ ಹೇಳಿಕೆಗೂ ಒಂದು ವಾರದ ಅಂತರವಿದೆ. ಒಬ್ಬನ ಬಳಿಕ ಇನ್ನೂ ಹಲವು ಉದ್ಯೋಗಿಗಳಿಗೂ ಕೊರೋನ ಪಾಸಿಟಿವ್ ಬಂದ ಬಳಿಕ ಕಂಪೆನಿಯ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಯಿತು. ಕಂಪೆನಿಯ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೇನ್ ಮಾಡಿಸಲಾಯಿತು. ನಂಜನಗೂಡಿಗೆ ಲಾಡ್ ಡೌನ್ ಮಾಡಲಾಯಿತು. 

ಆದರೆ , ಇಷ್ಟೆಲ್ಲಾ ಆಗಲು ಕಾರಣವಾದ ಆ ಮೊದಲ ಸೋಂಕು ಇಲ್ಲಿಗೆ ಕೊಟ್ಟು ಹೋಗಿದ್ದು ಯಾರು ? ಅಥವಾ ಇಲ್ಲಿಂದ ಹೊರಗೆ ಹೋಗಿ ತಂದಿದ್ದು ಯಾರು ? ಇದಕ್ಕೆ 50 ದಿನಗಳ ಬಳಿಕವೂ ಉತ್ತರ ಸಿಗಲಿಲ್ಲ. 

ಈ ನಡುವೆ ಒಬ್ಬೊಬ್ಬ ರಾಜಕಾರಣಿ ಸೋಂಕಿನ ಮೂಲದ ಬಗ್ಗೆ ಬಗೆ ಬಗೆ ಕತೆ ಹೇಳಿದರು. ಅದರಲ್ಲಿ ಎಲ್ಲಕ್ಕಿಂತ ಚಂದದ ಕತೆ ಹೇಳಿದ್ದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು. ಅವರು ಎಪ್ರಿಲ್ 16 ಕ್ಕೆ ಹೇಳಿಕೆ ನೀಡಿ ಕಂಪೆನಿಯ ಮೊದಲ ಸೋಂಕಿತ ಚೀನಾಕ್ಕೆ ಭೇಟಿ ನೀಡಿ ಅಲ್ಲಿಂದ ಸೋಂಕು ತಗುಲಿಸಿಕೊಂಡು ಇಲ್ಲಿಗೆ ಬಂದಿದ್ದಾನೆ ಎಂದು ಹೇಳಿದರು. ತಕ್ಷಣ ಸ್ಪಷ್ಟೀಕರಣ ನೀಡಿದ ಮೈಸೂರು ಪೊಲೀಸರು ಆ ಸೋಂಕಿತ ವಿದೇಶಕ್ಕೆ ಹೋಗಲೇ ಇಲ್ಲ ಎಂದು ಹೇಳಿದರು. ಇದಕ್ಕಿಂತಲೂ ತಮಾಷೆ ಎಂದರೆ, ಆ ಸೋಂಕಿತನ ಬಳಿ ಪಾಸ್ ಪೋರ್ಟೇ ಇರಲಿಲ್ಲ. ಅವನು ಹೇಗೆ ಚೀನಾಕ್ಕೆ ಹೋಗೋದು ? 

ಮೇ 7 ಕ್ಕೆ ಮೈಸೂರಿನ ಹೊಸ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಇನ್ನೊಂದು ಮಜವಾದ ಕತೆ ಹೇಳಿದರು. ಅವರ ಪ್ರಕಾರ ಒಂದೋ ಬೇರೆ ಕಡೆಯಿಂದ ನಂಜನಗೂಡು ಕಾರ್ಖಾನೆಗೆ ಬಂದ ಜುಬಿಲಂಟ್ ಉದ್ಯೋಗಿಯಿಂದ ಸೋಂಕು ಹರಡಿದೆ ಅಥವಾ ನಂಜನಗೂಡಿನಿಂದ ಬೇರೆ ಕಡೆಗೆ ಹೋದ ಜುಬಿಲಂಟ್ ಉದ್ಯೋಗಿಯಿಂದ ಅದು ಇಲ್ಲಿಗೆ ಬಂದಿದೆ. ಮೂರನೆಯದು ಮಾತ್ರ ಭಾರೀ ಸಂಶೋಧನೆ ಬಳಿಕ ಅವರು ಕಂಡು ಹಿಡಿದಿದ್ದು ಏನೆಂದರೆ ಬೆಂಗಳೂರಿನ ತಣಿಸಂದ್ರಕ್ಕೆ ಹೋಗಿದ್ದ ಜುಬಿಲಂಟ್ ಉದ್ಯೋಗಿಯೊಬ್ಬ ಅಲ್ಲಿ ದಿಲ್ಲಿಯಿಂದ ಬಂದಿದ್ದ ತಬ್ಲೀಗಿ ಒಬ್ಬನನ್ನು ಭೇಟಿಯಾಗಿದ್ದ , ಆತನಿಂದಲೇ ಸೋಂಕು ಬಂದಿರಬಹುದು ! ಆದರೆ ಆ ಮೂಲ ಯಾರು ಎಂದು ಇವತ್ತಿಗೂ ಗೊತ್ತಾಗಲೇ ಇಲ್ಲ. 

ಒಟ್ಟಾರೆ ಈ ಪ್ರಕರಣದಲ್ಲಿ ನಿಮಗೆ ಗೊತ್ತಾಗಲೇ ಬೇಕಾದ್ದು ಏನೆಂದರೆ, 

ತಬ್ಲೀಗಿಗಳ ಆ ರಾಶಿಯಲ್ಲಿ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಸೋಂಕಿನ ಮೂಲ ನಂಜನಗೂಡಿನ ಈ ಅತ್ಯಾಧುನಿಕ, ಅತ್ಯಂತ ವ್ಯವಸ್ಥಿತ ಕಾರ್ಖಾನೆಯಲ್ಲಿ ಮಾತ್ರ ಯಾರಿಗೂ ಸಿಗಲೇ ಇಲ್ಲ. ಹಾಗೆಯೇ ತಬ್ಲೀಗಿಗಳ ಬಗ್ಗೆ ಸ್ಪೋಟಕ ಮಾಹಿತಿಗಳ ಭಂಡಾರವನ್ನೇ ಹಿಂದಿ, ಕನ್ನಡ, ಇಂಗ್ಲೀಷ್ ಚಾನಲ್ ಗಳಿಗೆ ಒದಗಿಸುವ ' ಮೂಲಗಳು ' ಜುಬಿಲಂಟ್ ನಂತಹ ಕಂಪೆನಿಗಳಿಗೆ ತಲುಪಿದ ಸೋಂಕಿನ ಮೂಲದ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. 

ಇದು ಜುಬಿಲಂಟ್ ಹಾಗೂ ತಬ್ಲೀಗಿಗಳಿಗಿರುವ ವ್ಯತ್ಯಾಸ .

ಮಾಹಿತಿ: indianjournalismreview.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News