ಬಿಎಸ್‌ವೈ ಘೋಷಿಸಿದ ಮೂರನೇ ಪ್ಯಾಕೇಜ್ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟಿದ್ದೇ ಹೆಚ್ಚು: ಸಿದ್ದರಾಮಯ್ಯ

Update: 2020-05-16 12:17 GMT

ಬೆಂಗಳೂರು, ಮೇ 16: 'ಕೊರೋನ ವೈರಸ್ ಸೋಂಕಿನ ಹಾವಳಿಯಿಂದ ನೊಂದಿರುವ ರೈತರು ಮತ್ತು ಆಶಾ ಕಾರ್ಯಕರ್ತೆಯರಿಗೆ ನೆರವು ನೀಡುವ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಮೂರನೇ ಪ್ಯಾಕೇಜ್ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಪಾರದರ್ಶಕತೆ ಇಲ್ಲದ ಈ ಪ್ಯಾಕೇಜ್ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟಿದ್ದೇ ಹೆಚ್ಚು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಮಾರುಕಟ್ಟೆಯದ್ದು. ಈ ವರ್ಷ ರೈತರು ಬೆಳೆದಿರುವ 44 ಲಕ್ಷ ಟನ್ ಮೆಕ್ಕೆಜೋಳದಲ್ಲಿ ಖರೀದಿಯಾಗಿರುವುದು 22 ಸಾವಿರ ಟನ್ ಮಾತ್ರ. ನಿಮ್ಮ 5 ಸಾವಿರ ರೂ. ನೆರವು ಏನೇನೂ ಸಾಲದು. ಮೊದಲು ಲಾಭದಾಯಕ ಬೆಂಬಲ ಬೆಲೆ ನಿಗದಿಗೊಳಿಸಿ ರೈತರ ಮೆಕ್ಕೆಜೋಳ ಖರೀದಿಗೆ ವ್ಯವಸ್ಥೆ ಮಾಡಿ' ಎಂದು ಆಗ್ರಹಿಸಿದ್ದಾರೆ.

'ಕುರಿ, ಮೇಕೆ ಸತ್ತರೆ 5 ಸಾವಿರ ರೂ.ಪರಿಹಾರ ನೀಡುವುದು ಸ್ವಾಗತಾರ್ಹ. ಇದು ನಮ್ಮ ಸರಕಾರ ಪ್ರಾರಂಭಿಸಿದ್ದ 'ಅನುಗ್ರಹ' ಯೋಜನೆ. ಈ ಯೋಜನೆಯಂತೆ ರೋಗ ಮತ್ತು ಅಪಘಾತದಲ್ಲಿ ಮೃತಪಟ್ಟ ಹಸು, ಎತ್ತು, ಕೋಣ ಸೇರಿದಂತೆ ಎಲ್ಲ ಮೃತ ಜಾನುವಾರುಗಳ ಒಡೆಯರಿಗೆ ಈ ಸೌಲಭ್ಯ ವಿಸ್ತರಿಸಬೇಕು' ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

'ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಸ್ವಾಗತಾರ್ಹ. ಆದರೆ, ಇದನ್ನು ಆಶಾ ಕಾರ್ಯಕರ್ತೆಯರಿಗಷ್ಟೇ ಸೀಮಿತಗೊಳಿಸದೆ ಅರೇ ವೈದ್ಯಕೀಯ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಸೇರಿ ಇತರೆ ಅಗತ್ಯ ಸೇವಾ ಸಿಬ್ಬಂದಿಗೂ ವಿಸ್ತರಿಸಬೇಕು' ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News