×
Ad

ನಕಲಿ ಮದ್ಯದ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಸಚಿವ ರಮೇಶ್ ಜಾರಕಿಹೊಳಿ

Update: 2020-05-16 17:00 IST

ಬೆಳಗಾವಿ, ಮೇ 16: ಬೆಳಗಾವಿ ಭಾಗದಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಅದನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಗೋಕಾಕ್ ನಗರದಲ್ಲಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಈಗಾಗಲೇ ಗುಜರಾತ್ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಲಾಗಿದೆ. ಆದರೆ, ಅದು ಯಶಸ್ವಿಯಾಗಿಲ್ಲ. ಮದ್ಯಪಾನ ನಿಷೇಧದಿಂದ ನಕಲಿ ಮದ್ಯದ ಹಾವಳಿ ಹೆಚ್ಚಳವಾಗಲಿದೆ. ಹೀಗಾಗಿ ಈ ಹಾವಳಿ ತಡೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಬೇಕು ಎಂದು ಕೆಲ ಮಠಾಧೀಶರು ಆಗ್ರಹಿಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ರಾಜ್ಯ ಸರಕಾರ ಈ ಬಗ್ಗೆ ಕಠಿಣ ಕಾನೂನು ಜಾರಿಗೊಳಿಸಲು ಕ್ರಮ ವಹಿಸಬೇಕು ಎಂದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ಮದ್ಯಪಾನ ನಿಷೇಧ ಕಷ್ಟ ಸಾಧ್ಯ ಎಂದರು.

ಮೇ 17ರ ಬಳಿಕ ಲಾಕ್‍ಡೌನ್ ಸಡಿಲಿಕೆ ಸಂಭವವಿದೆ. ಆದರೆ, ಸಾರ್ವಜನಿಕರು ಕೊರೋನ ಸೋಂಕು ನಿಯಂತ್ರಣಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ರೋಗ ಬರದಂತೆ ತಡೆಗಟ್ಟಲು ಸ್ವಯಂ ಜಾಗೃತರಾಗುವ ಮೂಲಕ ಸೋಂಕು ತಡೆಗಟ್ಟಬೇಕು ಎಂದು ಅವರು ಹೇಳಿದರು.

ಮೇ ಅಂತ್ಯದ ವೇಳೆ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಳ್ಳಲಿದ್ದು, ಈ ಬಗ್ಗೆ ರಾಜ್ಯ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಜನಪ್ರತಿನಿಧಿಗಳ ಮುಂದುವರಿಕೆ ಅಥವಾ ಅಧಿಕಾರಿಗಳ ನಿಯೋಜನೆ ಸಂಬಂಧ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News