ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳ ಚಿಂತೆಗೀಡುಮಾಡಿದೆ: ಎಚ್.ಡಿ.ದೇವೇಗೌಡ

Update: 2020-05-16 12:14 GMT

ಬೆಂಗಳೂರು, ಮೇ 16: ಕೊರೋನ ಸೋಂಕಿತರ ಸಂಖ್ಯೆ ಕಳೆದ ಒಂದು ವಾರದಿಂದ ಹೆಚ್ಚಳವಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡುಮಾಡಿದೆ. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆಯೋ ಎಂಬ ಆತಂಕ ನನ್ನನ್ನು ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ದಯವಿಟ್ಟು ನನ್ನ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮೇ 18ರಂದು ನನ್ನ ಹುಟ್ಟುಹಬ್ಬದಂದು ನೀವು ಇರುವಲ್ಲಿಯೇ ನನಗೆ ನಿಮ್ಮ ಅಭಿಮಾನದ ಶುಭಾಶಯಗಳನ್ನು ಅರ್ಪಿಸಬೇಕಾಗಿ ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮ ಅಭಿಮಾನದ ಶಕ್ತಿ ಅಪಾರ, ಅದು ನನಗೆ ಚೈತನ್ಯದಾಯಕ, ನಮ್ಮ ಪಕ್ಷಕ್ಕೂ ಪ್ರೋತ್ಸಾಹದಾಯಕ, ಅದಕ್ಕಾಗಿ ನನ್ನ ಪೂರ್ವಭಾವಿ ಧನ್ಯವಾದಗಳು. ಆದರೆ, ಈ ಬಾರಿ ಮಾತ್ರ ನಿಮ್ಮ ಅಭಿಮಾನ ನೀವು ಇರುವ ಜಾಗದಿಂದಲೇ ಮೂಡಿಬರಲಿ. ಜನಜಾತ್ರೆಗೆ ಅನುವು ಮಾಡಿಕೊಡದಿರಲಿ ಎಂದು ದೇವೇಗೌಡ ಪ್ರಾರ್ಥಿಸಿದ್ದಾರೆ.

ಇಡೀ ಜಗತ್ತೆ ಕೊರೋನ ಮಹಾಮಾರಿಯ ಉಪಟಳದಿಂದ ಕಳೆದ ಮೂರು ತಿಂಗಳಿನಿಂದ ಗರ ಬಡಿದು ಕುಳಿತಿದೆ. ಇದಕ್ಕೆ ನಮ್ಮ ದೇಶವೂ, ನಮ್ಮ ರಾಜ್ಯವೂ ಹೊರತಾಗಿಲ್ಲ. ಈ ರೋಗವು ಸಾಂಕ್ರಾಮಿಕವಾದುದರಿಂದಲೂ ಮತ್ತು ಇದಕ್ಕೆ ಮದ್ದು ಶೋಧಿಸಲ್ಪಡದೆ ಇರುವುದರಿಂದಲೂ ಅನಿವಾರ್ಯವಾಗಿ ನಾವು ಲಾಕ್‍ಡೌನ್ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕೆ ಮೊರೆ ಹೋಗಲೇಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇವಸ್ಥಾನಗಳಿಂದ ಹಿಡಿದು ಚಲನಚಿತ್ರ ಮಂದಿರಗಳವರೆಗೆ, ಮದುವೆ ಸಮಾರಂಭಗಳಿಂದ ಹಿಡಿದು ಸಾವಿನ ಅಂತ್ಯಕ್ರಿಯೆಯವರೆಗೆ ನಿರ್ಬಂಧಗಳು ಹೇರಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರು ಹುಟ್ಟುಹಬ್ಬದ ಆಚರಣೆಗಳು ಯಾವುದೇ ರೀತಿಯಲ್ಲೂ ಜಾರಿಯಲ್ಲಿರುವ ನಿರ್ಬಂಧಗಳ ಉಲ್ಲಂಘನೆಗೆ ಅವಕಾಶ ನೀಡಬಾರದು. ಈಗಿನ ಪರಿಸ್ಥಿತಿಯನ್ನು ನನ್ನ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ದೇವೇಗೌಡ ಮನವಿ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News