ಮೇ 17ರವರೆಗೆ ದಾಸ್ತಾನು ಬಿಯರ್ ಮಾರಾಟಕ್ಕೆ ಅನುಮತಿ
ಬೆಂಗಳೂರು, ಮೇ 16: ಲಾಕ್‍ಡೌನ್‍ನಿಂದ ಬಿಕರಿಯಾಗದ ಬಿಯರ್ ನ ಬಳಕೆ ಅವಧಿ(ಆರು ತಿಂಗಳು) ಮುಗಿದು ವ್ಯರ್ಥವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಮೇ 17ರವರೆಗೆ ಹಾಲಿ ಬಿಯರ್ ದಾಸ್ತಾನು ಮಾರಾಟಕ್ಕೆ ಅಬಕಾರಿ ಇಲಾಖೆ ಶರತ್ತುಬದ್ಧ ಅನುಮತಿ ನೀಡಿದೆ. ಸೀಲ್ ಮಾಡಿರುವ ಬಿಯರ್ ಬಾಟಲ್‍ಗಳನ್ನು ಎಂಆರ್‍ಪಿ ದರದಲ್ಲೇ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.
ಆರ್.ವಿ.ಬಿ.ಗಳನ್ನು ಹೊಂದಿ ಬಾಟಲ್ಡ್ ಬಿಯರ್ ಮಾರಾಟ ಅನುಮತಿಯಿರುವ ಸನ್ನದುಗಳಲ್ಲಿನ ಬಾಟಲ್ಡ್ ಬಿಯರ್ ಸನ್ನದಿನಲ್ಲಿ ಊಟ, ತಿಂಡಿ ಪಾರ್ಸೆಲ್ ನೀಡಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ. ಹಾಲಿ ದಾಸ್ತಾನು ಮಾರಾಟಕ್ಕೆ ಅವಕಾಶವಿದ್ದು, ಹೊಸ ಖರೀದಿಗೆ ಅವಕಾಶವಿಲ್ಲ.
ಕಂಟೈನ್‍ಮೆಂಟ್ ವಲಯದಲ್ಲಿನ ಸನ್ನದುಗಳಿಗೆ ಈ ಅವಕಾಶ ಅನ್ವಯಿಸುವುದಿಲ್ಲ. ಬೆಳಗ್ಗೆ 9 ರಿಂದ ರಾತ್ರಿ 7ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಶರತ್ತು ಉಲ್ಲಂಘನೆ ಇಲ್ಲವೇ ದುರುಪಯೋಗವಾದರೆ ಸನ್ನದುದಾರರೇ ಜವಾಬ್ದಾರರಾಗಲಿದ್ದು, ಸನ್ನದು ಅಮಾನತು ಇಲ್ಲವೇ ರದ್ದುಪಡಿಸುವುದಾಗಿ ಅಬಕಾರಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪಾರ್ಸೆಲ್‍ಗೆ ಅವಕಾಶ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಎಲ್-2, ಸಿಎಲ್-4, ಸಿಎಲ್-7, ಸಿಎಲ್-6ಎ, ಸಿಎಲ್-7ಎ, ಸಿಎಲ್-9, ಸಿಎಲ್-16, ಸಿಎಲ್-18 ಹಾಗೂ ವೈನ್‍ಟ್ಯಾವರಿನ್ ಸನ್ನದುಗಳಲ್ಲಿ ಮಾರಾಟವಾಗದೆ ಉಳಿದ ಮದ್ಯವನ್ನು ಮೇ 17ರವರೆಗೆ ಬೆಳಗ್ಗೆ 9ರಿಂದ ರಾತ್ರಿ 7ರವರೆಗೆ ಮಾರಾಟ ಮಾಡಲು ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ರೆಸ್ಟೋರೆಂಟ್‍ನಲ್ಲಿ ಊಟ/ತಿಂಡಿ ಪಾರ್ಸೆಲ್ ರೂಪದಲ್ಲಿ ಇತರೆ ರೆಸ್ಟೋರೆಂಟ್‍ಗೆ ನಿಗದಿಪಡಿಸಿರುವ ಕಾಲಮಿತಿಯಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.