‘ಹಾಟ್‌ಸ್ಪಾಟ್ ನಗರದಿಂದ ಬಂದ ವ್ಯಕ್ತಿಯನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದು ಯಾಕೆ?’

Update: 2020-05-16 14:27 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಮೇ 16: ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಪ್ರಕರಣ ಪತ್ತೆಯಾಗುತ್ತಿದ್ದಂತೆ ಆತಂಕದ ಕಾರ್ಮೋಡ ಹೆಚ್ಚಾಗಿದ್ದು, ಮುಂಬೈನಂತಹ ಹಾಟ್‌ಸ್ಪಾಟ್ ನಗರದಿಂದ ಬಂದ ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡದೆ, ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದು ಯಾಕೆ ಎಂದು ಜಿಲ್ಲೆಯ ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ಮುಂಬೈನಂತಹ ಹಾಟ್ ಸ್ಪಾಟ್‌ನಿಂದ ಬಂದ ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡದೆ, ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದು ಯಾಕೆ? ಎಂದು ಜಿಲ್ಲೆಯ ನಾಗರಿಕರು ಪ್ರಶ್ನಿಸಿದ್ದು, ತೀರ್ಥಹಳ್ಳಿಯಲ್ಲಿನ ಸೋಂಕಿತ ಪಿ-995ನ ಟ್ರಾವೆಲ್ ಹಿಸ್ಟರಿ ಕುರಿತು ಮಾಧ್ಯಮಗಳಿಗೆ ಕೊಡಲು ಜಿಲ್ಲಾಧಿಕಾರಿ ನಿರಾಕರಿಸುವುದನ್ನು ಗಮನಿಸಿದರೆ ಜಿಲ್ಲಾಡಳಿತ ಕೆಲವು ಸಂಗತಿಗಳನ್ನು ಮುಚ್ಚಿಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಕೊರೋನ ಸೋಂಕಿತನ ಟ್ರಾವೆಲ್ ಹಿಸ್ಟರಿ ಕೊಡುವುದು ರಾಜ್ಯ ಸರಕಾರದ ಜವಾಬ್ದಾರಿ ಎಂದು ಹೇಳಿ ಜಿಲ್ಲಾಧಿಕಾರಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಆಶಾ ಕಾರ್ಯಕರ್ತೆಯವರು ಪಿ-995 ಅವರ ಮನೆಗೆ ಹೋಗಿ ಎಚ್ಚರಿಕೆ ನೀಡಿ, ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿ, ಮನೆಮುಂದೆ ಸೂಚನಾ ಫಲಕವನ್ನು ಅಂಟಿಸಿ ಬಂದಿದ್ದಾರೆ. ಈ ಸಂದರ್ಭದಲ್ಲೂ ಮುಂಬೈನಿಂದ ಬಂದಿದ್ದಾಗಿ ತಿಳಿಸಿದ್ದರೂ ಸಾಂಸ್ಥಿಕ ಕ್ವಾರಂಟೈನ್ ಮಾಡದೇ ಇದ್ದಿದ್ದು ಏಕೆ? ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.

ಹೊರರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತದೆ. ಆದರೆ, ಈ ಪಿ -995 ಜಿಲ್ಲಾಡಳಿತದ ಮಾಹಿತಿ ಪ್ರಕಾರ ಮೇ 11ರಂದೇ ತೀರ್ಥಹಳ್ಳಿಯ ಹಳ್ಳಿಬೈಲಿನಲ್ಲಿರುವುದು ಗೊತ್ತಾಗಿದೆ. ಹಾಗಾದರೆ ಆತ ಜಿಲ್ಲಾ ಗಡಿಗಳಲ್ಲಿ ತಪಾಸಣೆ ಬಿಗಿಯಾಗಿದ್ದಾಗಲೂ, ಯಾರ ಗಮನಕ್ಕೂ ಬಾರದೆ ತನ್ನ ಊರಿಗೆ ಹೇಗೆ ತಲುಪಲು ಸಾಧ್ಯವಾಯಿತು? ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿದೆ.

ಕೆಲವು ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷವೇ ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚಲು ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಬೇಕು ಎಂಬುದು ಜಿಲ್ಲೆಯ ಸಾರ್ವಜನಿಕರ ಒತ್ತಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News