×
Ad

ಮಲೇಶಿಯಾದಲ್ಲಿ ಸಿಲುಕಿರುವ ಕನ್ನಡಿಗರು: ನೆರವಿಗಾಗಿ ಸಿಎಂ, ಕೇಂದ್ರ ಸಚಿವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ

Update: 2020-05-16 20:30 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 16: ಕಳೆದ ಎರಡು ತಿಂಗಳಿಂದ ಮಲೇಶಿಯಾದಲ್ಲಿ ಸಿಲುಕಿರುವ 86 ಕನ್ನಡಿಗರು ಕರ್ನಾಟಕಕ್ಕೆ ಮರಳಲು ಕಾತರರಾಗಿದ್ದು, ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಕೋಲಾರ ಸಂಸದರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡುತ್ತಿದ್ದಾರೆ.

ತಮಿಳುನಾಡು, ಕೇರಳ ರಾಜ್ಯಗಳು ತಮ್ಮ ರಾಜ್ಯದ ಜನರನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ನಮಗೇಕೆ ಇನ್ನು ವ್ಯವಸ್ಥೆ ಮಾಡಿಲ್ಲ ಎಂದು ಸಿಲುಕಿಕೊಂಡವರು ಪ್ರಶ್ನಿಸಿದ್ದಾರೆ. ಈ ಕುರಿತು ಭಾರ್ಗವ್ ಎಂಬುವರು ಮಲೇಶಿಯಾದಲ್ಲಿ ಸಿಲುಕಿರುವವರ ಹೆಸರು ಸಹಿತ ಸಿಎಂ ಮತ್ತು ಕೇಂದ್ರ ಸಚಿವ ಸದಾನಂಗಡೌಡರಿಗೆ ಪತ್ರ ಬರೆದಿದ್ದಾರೆ.

ಕೋಲಾರ ಜಿಲ್ಲೆಯವನಾದ ನಾನು ಬೆಂಗಳೂರಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದೇನೆ. ಕಾಲೇಜಿನ ಕಡೆಯಿಂದ ಇಂಟರ್ನ್‍ಶಿಪ್ ಮಾಡಲು ನಾಲ್ವರು ವಿದ್ಯಾರ್ಥಿಗಳ ಜೊತೆಗೆ ಮಾ.13ರಂದು ಮಲೇಶಿಯಾಗೆ ಬಂದೆವು. ಸೇಲಂಗೋರ್ ರಾಜ್ಯದಲ್ಲಿ ಉಳಿದುಕೊಂಡಿದ್ದೇವೆ. ಆದರೆ, ಮಾ.17ರಂದೇ ಲಾಕ್‍ಡೌನ್ ಆಗಿ ಮಲೇಶಿಯಾದಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಮೇ 13ಕ್ಕೆ 2 ತಿಂಗಳಾಗುತ್ತದೆ. ನಮ್ಮ ಕಾಲೇಜಿನ ಆಡಳಿತ ಮಂಡಳಿಯಿಂದ ಕೊಟ್ಟಿರುವ ಫ್ಲ್ಯಾಟ್‍ನಲ್ಲಿ ನೆಲೆಸಿದ್ದೇವೆ. ಎಲ್ಲಿಯೂ ಹೊರಗೆ ಹೋಗುವಂತಿಲ್ಲ. ಮೂರು ತಿಂಗಳ ಇಂಟರ್ನ್‍ಶಿಪ್ ಇತ್ತು. ಆದರೆ, ಲಾಕ್‍ಡೌನ್ ಕಾರಣ 2 ತಿಂಗಳಿಂದ ಏನು ಆಗಿಲ್ಲ. ಫ್ಲ್ಯಾಟ್‍ನಲ್ಲೇ ಬಂಧಿಯಾಗಿದ್ದೇನೆ ಎಂದು ಭಾರ್ಗವ್ ತಿಳಿಸಿದ್ದಾರೆ.

ನನ್ನಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕರ್ನಾಟಕಕ್ಕೆ ತೆರಳುವ 86 ಜನರಿದ್ದೇವೆ. ಅದನ್ನು ಪಟ್ಟಿ ಮಾಡಿ ಜಾಲತಾಣದಲ್ಲಿ ಹಾಕಿ ಕರೆಸಿಕೊಳ್ಳುವಂತೆ ಎಲ್ಲರಿಗೂ ಮನವಿ ಮಾಡುತ್ತಿದ್ದೇವೆ. ಮಲೇಶಿಯಾದಲ್ಲಿರುವ ಹೈಕಮೀಷನ್ ಕಚೇರಿಗೆ ಕರೆ ಮಾಡಿ ನಮ್ಮ ಹೆಸರು ನೀಡಿದ್ದೇವೆ. ಆದರೆ, ಬೆಂಗಳೂರಿಗೆ ವಿಮಾನ ವ್ಯವಸ್ಥೆ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ವಿಮಾನ ವ್ಯವಸ್ಥೆ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನಮ್ಮ ಬಳಿಯಿರುವ ಹಣ ಮತ್ತು ಕಾಲೇಜಿನ ಆಡಳಿತ ಮಂಡಳಿಯಿಂದ ಹೇಗೋ ಜೀವನ ಸಾಗಿಸುತ್ತಿದ್ದೇವೆ. ಆದರೆ, ನಮ್ಮ ಬಳಿ ಇರುವ ಹಣ ಖಾಲಿಯಾಗುತ್ತಿದೆ. ಬಂದ ಉದ್ದೇಶವೂ ಈಡೇರಿಲ್ಲ. ಹೀಗಾಗಿ, ರಾಜ್ಯ ಸರಕಾರ ಆದಷ್ಟು ಶೀಘ್ರ ಮಲೇಶಿಯಾದಲ್ಲಿ ಸಿಲುಕಿರುವವರನ್ನು ಕರ್ನಾಟಕಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ಬೇರೆ ದೇಶಗಳಿಂದ ಬೆಂಗಳೂರಿಗೆ ವಿಮಾನ ಬಂದಿದೆ. ಸಿಂಗಾಪುರದಿಂದ ಬೆಂಗಳೂರಿಗೆ ವಿಮಾನ ಬರುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ, ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಅಲ್ಲಿರುವ ಕನ್ನಡಿಗರು ಮನವಿ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News