ಸರ್ಕಾರ ಅನುಮತಿ ಕೊಟ್ಟರೆ ಮಾತ್ರ ಈದ್ ನಮಾಝ್: ಚಿಕ್ಕಮಗಳೂರು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾಅತ್
ಚಿಕ್ಕಮಗಳೂರು, ಮೇ.16: ಕೊರೋನ ವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಮುಖವಾಗಿ ಮೇ. 24 ಅಥವಾ 25ನೇ ತಾರೀಕಿನಂದು ಈದ್ ಹಬ್ಬ ಇರುವುದರಿಂದ ಸರ್ಕಾರವು ಅನುಮತಿ ಕೊಟ್ಟರೆ ಮಾತ್ರ ಈದ್ ನಮಾಝ್ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ವಿನಂತಿಸಿದೆ.
ಚಿಕ್ಕಮಗಳೂರು ನಗರ ಜಾಮಿಯಾ ಅರಬಿಯ ಕಂಜುಲ್ ಇಮಾನ್ ಸಂಸ್ಥೆಯಲ್ಲಿ ವಿವಿಧ ಸುನ್ನಿ ಸಂಸ್ಥೆಗಳ ಮುಖಂಡರು ಹಾಗೂ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪವಿತ್ರ ರಮಝಾನ್ ಅನ್ನು ಸರಳವಾಗಿ ಆಚರಿಸಲು ಆಯಾ ಪ್ರದೇಶದ ಧಾರ್ಮಿಕ ಮುಖಂಡರು ಸಮುದಾಯದವರಿಗೆ ಮನವರಿಕೆ ಮಾಡಬೇಕು. ಹಬ್ಬದ ಸಂದರ್ಭ ಅನವಶ್ಯಕವಾಗಿ ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ಜನದಟ್ಟಣೆಯ ಪ್ರದೇಶವನ್ನಾಗಿ ಮಾರ್ಪಾಡುವುದನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಶಾಹಿದ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಯೂಸುಫ್ ಹಾಜಿ ಮನ್ಸೂರ್ ಅಹ್ಮದ್, ಅಖ್ತರ್ ಹುಸೇನ್ ರಝ್ವಿ ಹಾಗೂ ಫಾರೂಕ್ ಅಹ್ಮದ್ ರಝ್ವಿ ಸೇರಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.