ರಕ್ಷಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳ, ಮೇಕ್ ಇನ್ ಇಂಡಿಯಾಗೆ ಒತ್ತು: ವಿತ್ತ ಸಚಿವೆ

Update: 2020-05-16 17:54 GMT

► ವಿಮಾಯಾನ, ಬಾಹ್ಯಾಕಾಶ ಅಣುಶಕ್ತಿ ಕ್ಷೇತ್ರದಲ್ಲೂ ಖಾಸಗಿ ಪಾಲುದಾರಿಕೆ

ಮುಂಬೈ, ಮೇ 16: ದೇಶವನ್ನು ಸಂಕಷ್ಟದ ಸನ್ನಿವೇಶಕ್ಕೆ ದೂಡಿರುವ ಕೋವಿಡ್-19 ಹಾಗೂ ಲಾಕ್‌ಡೌನ್‌ನಿಂದಾಗಿ ನಿಸ್ತೇಜಗೊಂಡಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಮೋದಿ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಭಾಗವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಕ್ಷಣೆ, ಬಾಹ್ಯಾಕಾಶ, ಅಣುಶಕ್ತಿ, ಖನಿಜ ಸಂಪತ್ತು, ಕಲ್ಲಿದ್ದಲು, ವೈಮಾನಿಕ,ಇಂಧನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರಿಕೆಗೆ ಒತ್ತು ನೀಡುವ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಹೊಸದಿಲ್ಲಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ‘ಆತ್ಮನಿರ್ಭರ ಭಾರತ’ ಪ್ಯಾಕೇಜ್‌ನ ನಾಲ್ಕನೆ ಹಂತದ ವಿವರಗಳನ್ನು ನೀಡಿದ ಅವರು ಕಲ್ಲಿದ್ದಲು ವಲಯದ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರವು ಕೈಗೊಳ್ಳಲಿರುವ ಹಲವಾರು ಕ್ರಮಗಳನ್ನು ಪ್ರಕಟಿಸಿದರು. 500ಕ್ಕೂ ಅಧಿಕ ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕಲಾಗುವುದು. ಕಲ್ಲಿದ್ದಲು ನಿಕ್ಷೇಪಗಳ ಹರಾಜಿನಲ್ಲಿ ಪಾಲ್ಗೊಳ್ಳಲು ಯಾವುದೇ ರೀತಿಯ ಶರತ್ತು ಅಥವಾ ಅರ್ಹತೆಯ ಅಗತ್ಯವಿಲ್ಲವೆಂದು ಅವರು ತಿಳಿಸಿದರು. ಭಾರತವು  ಅತ್ಯಧಿಕ ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಷಟ್ಟೆಗಳ ಪೈಕಿ ಮೂರನೆ ಸ್ಥಾನದಲ್ಲಿದೆಯಾದರೂ, ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ ಎಂದರು.

ಆಲ್ಯುಮಿನಿಯಂ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ಪ್ರಕಟಿಸಿದರು. ಗಣಿಗಳ ಲೀಸ್‌ಗಳ ವರ್ಗಾವಣೆ ಹಾಗೂ ಬಳಕೆಯಾಗದ ಹೆಚ್ಚುವರಿ ಖನಿಜಗಳ ಮಾರಾಟಕ್ಕೆ ಇರುವ ನಿರ್ಬಂಧಗಳನ್ನು ತೆಗೆದುಹಾಕಲಾಗುವುದೆಂದು ಸಚಿವೆ ತಿಳಿಸಿದರು.

ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇಂಡಿಯಾ ಯೋಜನೆ ಮೂಲಕ ಸ್ವಾವಲಂಬನೆಗೆ ಸಚಿವೆ ಪ್ಯಾಕೇಜ್‌ನಲ್ಲಿ ಒತ್ತು ನೀಡಿದ್ದಾರೆ. ಆಮದು ನಿಷೇಧಿಸಲ್ಪಟ್ಟ ರಕ್ಷಣಾ ಸಾಮಾಗ್ರಿಗಳ ಕುರಿತು ಸರಕಾರವು ಶೀಘ್ರದಲ್ಲೇ ಅಧಿಸೂಚನೆಯನ್ನು ಪ್ರಕಟಿಸಲಿದೆ ಎಂದರು. ರಕ್ಷಣಾ ವಲಯದ ಕೈಗಾರಿಕೆಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ಶೇ.49ರಿಂದ ಶೇ.74ಕ್ಕೆ ಏರಿಸಲಾಗುವುದೆಂದು ಅವರು ತಿಳಿಸಿದರು.ರಕ್ಷಣಾ ವಲಯದ ಕಂಪೆನಿಗಳು ಶೇರು ಮಾರುಕಟ್ಟೆ ಪ್ರವೇಶಿಸಲು ಅವಕಾಶ ನೀಡಲಾಗುವುದೆಂದು ಸಚಿವೆ ಹೇಳಿದರು.

ವಿದ್ಯುತ್ ಕಂಪೆನಿಗಳ ಖಾಸಗೀಕರಣಕ್ಕೂ ಕೇಂದ್ರ ಸರಕಾರ ಹೆಜ್ಜೆಯಿಟ್ಟಿದೆ. ಮೊದಲಿಗೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳನ್ನು ಖಾಸಗೀಕರಣಗೊಳಿಸಲಾಗುವುದೆಂದು ಸಚಿವೆ ಘೋಷಿಸಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವವನ್ನು ಅಧಿಕಗೊಳಿಸಲಾಗುವುದು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸೌಲಭ್ಯಗಳನ್ನು ಖಾಸಗಿ ಸಂಸ್ಥೆಗಳು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದೆಂದು ಸಚಿವೆ ತಿಳಿಸಿದ್ದಾರೆ.

ದೇಶದ 12 ವಿಮಾನನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಮತ್ತು ಭಾರತದ ವಾಯುಕ್ಷೇತ್ರದಲ್ಲಿ ನಾಗರಿಕ ವಿಮಾನಗಳಿಗೆ ಇರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದೆಂದು ಅವರು ತಿಳಿಸಿದರು. ಪ್ರಸಕ್ತ ದೇಶದ ಶೇ.60ರಷ್ಟು ವಾಯು ಕ್ಷೇತ್ರವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಾಯು ಕ್ಷೇತ್ರವನ್ನು ನಾಗರಿಕ ವಿಮಾನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದೆಂದು ಅವರು ತಿಳಿಸಿದರು. ಇದರಿಂದಾಗಿ ನಾಗರಿಕ ವಿಮಾನಗಳ ಸಂಚಾರದ ಅವಧಿ ಕಡಿಮೆಯಾಗಲಿದೆ ಮತ್ತು ನಾಗರಿಕ ವಿಮಾನ ವಲಯಕ್ಕೆ ವಾರ್ಷಿಕವಾಗಿ 1 ಸಾವಿರ ಕೋಟಿ ರೂ. ಲಾಭವಾಗಲಿದೆ ಎಂದರು. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ದೇಶದಲ್ಲಿ ವಿಶ್ವದರ್ಜೆಯ ವಿಮಾನನಿಲ್ದಾಣಗಳನ್ನು ಸ್ಥಾಪನೆಯಾಗಲಿದೆ ಎಂದು ಸಚಿವೆ ತಿಳಿಸಿದರು.

ಅಣುಶಕ್ತಿ ಕ್ಷೇತ್ರದಲ್ಲಿಯೂ ಖಾಸಗಿ ಪಾಲುದಾರಿಕೆಯನ್ನು ಉತ್ತೇಜಿಸಲಾಗುವುದು. ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯೊಂದಿಗೆ ಮೆಡಿಕಲ್ ಐಸೋಟೊಪ್‌ಗಳ ಉತ್ಪಾದನೆ ಹಾಗೂ ಆಹಾರಸಂರಕ್ಷಣೆಗಾಗಿ ವಿಕಿರಣರಾಹಿತ್ಯತೆ ಸಂಶೋಧನೆಗಳನ್ನು ಕ್ರಮಗಳನ್ನು ಕೈಗೊಳ್ಳಲಾಗುವುದು. 8100 ಕೋಟಿ ರೂ.ವೆಚ್ಚದಲ್ಲಿ ‘ವಿಸಿಬಿಲಿಟಿ ಗ್ಯಾಪ್ ಫಂಡಿಂಗ್’ ಯೋಜನೆಯ ಮೂಲಕ ಸಾಮಾಜಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಸಚಿವೆ ತಿಳಿಸಿದರು.

 ಮುಖ್ಯಾಂಶಗಳು...

► ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು. ಭಾರತೀಯ ಕಂಪೆನಿಗಳ ಶಸ್ತ್ರಾಸ್ತ್ರ ಉತ್ಪನ್ನಗಳ ಖರೀದಿಗೆ ಆದ್ಯತೆ

► ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಶೇ.49ರಿಂದ ಶೇ.74ಕ್ಕೆ ಹೆಚ್ಚ

► ಕೆಲವು ನಿರ್ದಿಷ್ಟ ಮಿಲಿಟರಿ ಉಪಕರಣಗಳ ಆಮದು ನಿಷೇಧ

► ಕಲ್ಲಿದ್ದಲು ವಲಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ

► ಕಲ್ಲಿದ್ದಲು ವಲಯದ ಖಾಸಗೀಕರಣ; ಬಿಡ್ ಮೂಲಕ ಕಲ್ಲಿದ್ದಲು ನಿಕ್ಷೇಪಗಳ ಹರಾಜು

► 6 ವಿಮಾನ ನಿಲ್ದಾಣಗಳ ಖಾಸಗೀಕರಣ

► ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ವಿಶ್ವದರ್ಜೆಯ ವಿಮಾನನಿಲ್ದಾಣಗಳ ಸ್ಥಾಪನೆ

► ಪ್ರಯಾಣಿಕರ ವಿಮಾನ ಸಂಚಾರ ಸುಗಮಗೊಳ್ಳಲು ವಾಯುಯಾನ ಕ್ಷೇತ್ರದ ಮೇಲಿನ ನಿಯಂತ್ರಣಗಳ ಸಡಿಲಿಕೆ

► ಎರಡು ಹಂತಗಳಲ್ಲಿ 12 ವಿಮಾನನಿಲ್ದಾಣಗಳ ಖಾಸಗೀಕರಣ.ಕೇಂದ್ರಕ್ಕೆ 13 ಕೋಟಿ ಆದಾಯದ ನಿರೀಕ್ಷೆ

► ವಿದ್ಯುತ್‌ಸರಬರಾಜು ಕಂಪೆನಿಗಳ ಖಾಸಗೀಕರಣಕ್ಕೂ ಮುನ್ನುಡಿ

► ಬಾಹ್ಯಾಕಾಶ,ಅಣುಶಕ್ತಿ ಯೋಜನೆಗಳಲ್ಲಿಯೂ ಖಾಸಗಿ ಸಹಭಾಗಿತ್ವ. ಇಸ್ರೋ ಸೌಲಭ್ಯಗಳನ್ನು ಬಳಸು ಖಾಸಗಿ ಕಂಪೆನಿಗಳಿಗೂ ಅವಕಾಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News