ರಾಜ್ಯದಲ್ಲಿ ಇಂದು 99 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1,246ಕ್ಕೆ ಏರಿಕೆ
ಬೆಂಗಳೂರು, ಮೇ 18: ಕರ್ನಾಟಕದಲ್ಲಿ ರವಿವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ 5 ಗಂಟೆಯಿಂದ ಕೇವಲ 24 ಗಂಟೆಗಳ ಅವಧಿಯಲ್ಲಿ 99 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನ ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1246 ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 530 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 678 ಮಂದಿಯನ್ನು ಆಯಾ ಜಿಲ್ಲಾ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿದ್ದು, 12 ಜನರನ್ನು ಐಸಿಯುನಲ್ಲಿಡಲಾಗಿದೆ.
ಇಂದು ಮೈಸೂರು ಹಾಗೂ ಕೊಡಗಿನಲ್ಲಿ ಮತ್ತೆ ಕೊರೋನ ಖಾತೆ ತೆರೆದಿದ್ದು, ಕೊಡಗು 1, ಮೈಸೂರು 1 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಹಾಸನ 4, ಮಂಡ್ಯ 17, ರಾಯಚೂರು 6, ಬೆಳಗಾವಿ 2, ವಿಜಯಪುರ 5, ಕೊಪ್ಪಳ 3, ಮೈಸೂರು 1, ಕೊಡಗು 1, ಬೆಂಗಳೂರು 24, ಗದಗ 5, ಬಳ್ಳಾರಿ 1, ದಾವಣಗೆರೆ 1, ಕಲಬುರಗಿ 10, ಉತ್ತರಕನ್ನಡ 9, ಯಾದಗಿರಿ 5, ಬೀದರ್ 1, ಬೆಳಗಾವಿ 1, ದಕ್ಷಿಣಕನ್ನಡ 2, ಉಡುಪಿ 1 ಕೇಸ್‍ಗಳು ವರದಿಯಾಗಿವೆ.
ರಾಜ್ಯದ 532 ಜ್ವರ ಚಿಕಿತ್ಸಾಲಯದಲ್ಲಿ ಇಂದು 7322 ವ್ಯಕ್ತಿಗಳನ್ನು ಹಾಗೂ ಇದುವರೆಗೂ 417545 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ.
250 ಶಂಕಿತ ಜನರನ್ನು ವಿವಿಧ ಆಸ್ಪತ್ರೆಗಳಿಂದ ಇಂದು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.