ಮುಂಬೈನಿಂದ ಬಂದ ಮಹಿಳೆಗೆ ಕೋವಿಡ್-19 ಪಾಸಿಟಿವ್: ಕೊಡಗು ಜಿಲ್ಲಾಧಿಕಾರಿ

Update: 2020-05-18 13:45 GMT

ಮಡಿಕೇರಿ, ಮೇ 18 : ಮುಂಬೈನಿಂದ ಕೊಡಗು ಜಿಲ್ಲೆಗೆ ಆಗಮಿಸಿದ್ದ 45 ವರ್ಷದ ಮಡಿಕೇರಿ ತಾಲ್ಲೂಕಿನ ಮಹಿಳೆಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಮಹಿಳೆಯ ಮುಂಬೈನಲ್ಲಿ ಹೋಂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಮೇ 14 ರಂದು ಮುಂಬೈನಿಂದ ಮಂಗಳೂರಿಗೆ ಖಾಸಗಿ ಟ್ಯಾಕ್ಸಿಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯವರೊಂದಿಗೆ  ಹೊರಟಿದ್ದಾರೆ. ಇವರಲ್ಲಿ ಕೊಡಗು ಜಿಲ್ಲೆಯವರು ಈ ಮಹಿಳೆಯಾಗಿದ್ದಾರೆ ಎಂದು ಅವರು ಹೇಳಿದರು.   

ನಂತರ ಮಂಗಳೂರಿನ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಕೊಡಗು ಜಿಲ್ಲೆಗೆ ತೆರಳಬೇಕಿದ್ದು, ವಾಹನ ವ್ಯವಸ್ಥೆ  ಮಾಡಿಕೊಡುವಂತೆ ಕೋರಿದ್ದಾರೆ. ಈ ಹಿನ್ನೆಲೆ ಪೊಲೀಸ್ ಇಲಾಖೆಯವರು ಸಂಪಾಜೆಯವರೆಗೆ ಟ್ಯಾಕ್ಸಿಯಲ್ಲಿ ಕಳುಹಿಸಿದ್ದಾರೆ. ಮೇ 16 ರಂದು ರಾತ್ರಿ 9 ಗಂಟೆಗೆ ಸಂಪಾಜೆ ಚೆಕ್‍ಪೋಸ್ಟ್ ಗೆ ಆಗಮಿಸಿದ್ದಾರೆ. ಸಂಪಾಜೆ ಚೆಕ್‍ಪೋಸ್ಟ್ ನಲ್ಲಿ ಥರ್ಮೋ ಸ್ಕ್ರೀನಿಂಗ್ ಮಾಡಿ, ಆಂಬುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದರು. 

ಮಂಗಳೂರಿನಿಂದ ಸಂಪಾಜೆ ವರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದ ವಾಹನ ಚಾಲಕರ ಬಗ್ಗೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.   

ಕೋವಿಡ್ ಸೋಂಕಿತ ಮಹಿಳೆಯು ಎಲ್ಲಿಯೂ ಸಹ ನೇರ ಸಂಪರ್ಕ ಹೊಂದಿರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ಪ್ರದೇಶವಿರುವುದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.   

ಅಂತರ್ ರಾಜ್ಯದಿಂದ ಸಾರಿಗೆ ಸಂಪರ್ಕ ಇರುವುದರಿಂದ ಸ್ಥಳೀಯರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಗೆ ಮಹಾರಾಷ್ಟ್ರದಿಂದ 40 ಮಂದಿ, ತಮಿಳುನಾಡಿನಿಂದ 75, ಕೇರಳದಿಂದ 192 ಮಂದಿ ಹಾಗೂ ಆಂಧ್ರ ಪ್ರದೇಶ ಮತ್ತು ತೆಲಂಗಾಣ 14 ಮತ್ತು ರಾಜಸ್ತಾನ 8 ಸೇರಿದಂತೆ ಒಟ್ಟು 420 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ ಎಂದರು.  

ಈಗಾಗಲೇ ಕಣ್ಣೂರಿನಿಂದ 4 ಮಂದಿ ಕೊಡಗು ಜಿಲ್ಲೆಗೆ ಬಂದಿದ್ದು ಸಾಂಸ್ಥಿಕ ಸಂಪರ್ಕ ತಡೆಯಲ್ಲಿದ್ದಾರೆ. ಇವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಹಾಗೆಯೇ ಮುಂಬೈ ಬಂದರಿನಿಂದ ಕೊಡಗಿನ ಒಬ್ಬರು ಮತ್ತು ಬೆಂಗಳೂರಿನ ಇಬ್ಬರು ಮಂಗಳೂರಿನ ಮೂಲಕ ಕೊಡಗಿಗೆ ಬಂದಿದ್ದು, ಇನರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ ಎಂದು ಎಂದು ಅನೀಸ್ ಕಣ್ಮಣಿ ಜಾಯ್ ಅವರು ನುಡಿದರು.  

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೇ ಅಂತ್ಯದೊಳಗೆ ಕೋವಿಡ್-19 ಪ್ರಯೋಗಾಲಯಕ್ಕೆ ಚಾಲನೆ ದೊರೆಯಲಿದೆ. ಹಾಗೆಯೇ ಲಾಕ್‍ಡೌನ್ ಸಡಿಲಿಕೆ ಸಂಬಂಧ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಆತಂಕ ಬೇಡ
ಕೊರೋನಾ ಸೋಂಕು ಕಾಣಿಸಿಕೊಂಡ ಮಹಿಳೆಯನ್ನು ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News