ಸಾರಿಗೆ ಚಾಲಕ-ನಿರ್ವಾಹಕರು ಕೋವಿಡ್-19ರಲ್ಲಿ ಮೃತರಾದರೆ ಕುಟುಂಬಕ್ಕೆ 30ಲಕ್ಷ ರೂ.ಪರಿಹಾರ: ಲಕ್ಷ್ಮಣ ಸವದಿ

Update: 2020-05-18 14:54 GMT

ಬೆಂಗಳೂರು, ಮೇ 18: ಸರಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ವೇಳೆ ಕೋವಿಡ್-19 ಪಿಡುಗಿಗೆ ತುತ್ತಾಗಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30ಲಕ್ಷ ರೂ.ಪರಿಹಾರವನ್ನು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಮೇ 19ರಿಂದ ಸಾರಿಗೆ ಸಂಸ್ಥೆಗಳ ಬಸ್ಸುಗಳು ಕಾರ್ಯನಿರ್ವಹಿಸಲಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸರಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರಿಗೆ ಸಂಸ್ಥೆಗಳ ಎಲ್ಲ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿಗಳು ಗಮನಹರಿಸುವ ಮೂಲಕ ಕೋವಿಡ್-19 ರೋಗವನ್ನು ತಡೆಗಟ್ಟಲು ಸಹಕರಿಸಬೇಕೆಂದು ತಿಳಿಸಿದ್ದಾರೆ.

ಪ್ರಯಾಣಿಕರು ಬಸ್ಸುಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಸರಕಾರದೊಂದಿಗೆ ಸಹಕರಿಸಬೇಕೆಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News