ಚಿಕ್ಕಮಗಳೂರು: ಭಾರೀ ಮಳೆಗೆ ರಸ್ತೆಗುರುಳಿದ ಮರಗಳು; ವಿದ್ಯುತ್ ಸಂಪರ್ಕ ಕಡಿತ

Update: 2020-05-18 16:07 GMT

ಚಿಕ್ಕಮಗಳೂರು, ಮೇ 18: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಬಿರುಸುಗೊಂಡಿದೆ. ರವಿವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನವರೆಗೂ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಧಾರಾಕಾರ ಮಳೆ ಪರಿಣಾಮ ಮಲೆನಾಡು ಭಾಗದಲ್ಲಿ ನೂರಾರು ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಮಲೆನಾಡಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆಯನ್ನು ಜನರು ಎದುರಿಸುವಂತಾಗಿದೆ.

ರವಿವಾರ ಸಂಜೆ ವೇಳೆ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಸಾಧಾರಣ ಮಳೆಯಾಗಿದ್ದು, ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಮಳೆಯ ಸುಳಿವಿರಲಿಲ್ಲವಾದರೂ ಧಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.

ಆದರೆ ರವಿವಾರ ಮಧ್ಯರಾತ್ರಿ ಇಡೀ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಮಲೆನಾಡು ಭಾಗದಲ್ಲೂ ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಸುರಿದಿದ್ದು, ರವಿವಾರ ರಾತ್ರಿ ಆರಂಭವಾದ ಮಳೆ ಸೋಮವಾರ ಬೆಳಗ್ಗೆ 10 ಗಂಟೆಯವರೆಗೂ ಸುರಿಯಿತು.

ಮಲೆನಾಡು ಭಾಗದ ಶೃಂಗೇರಿ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ, ಆಣೂರು, ಆವುತಿ, ವಸ್ತಾರೆ, ಮಲ್ಲಂದೂರು ಮೊದಲಾದ ಮಲೆನಾಡು ಭಾಗದ ಹೋಬಳಿಗಳ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು, ಮಳೆಯ ನರ್ತನಕ್ಕೆ ಮಲೆನಾಡಿನಾದ್ಯಂತ ನೂರಾರು ಮರಗಳು ಧರೆಗುರುಳಿವೆ. ರಸ್ತೆ ಬದಿಯ ಮರಗಳು ವಿದ್ಯುತ್ ಕಂಬಗಳ ನಡುವಿನ ತಂತಿಗಳ ಮೇಲೆ ಉರುಳಿದ ಪರಿಣಾಮ ಮಲೆನಾಡಿನ ಬಹುತೇಕ ಭಾಗಗಳಲಿ ರವಿವಾರ ರಾತ್ರಿ ಹಾಗೂ ಸೋಮವಾರ ಇಡೀ ದಿನ ವಿದ್ಯುತ್ ಕಡಿತ ಉಂಟಾಗಿತ್ತು. ರಾತ್ರಿ, ಬೆಳಗ್ಗೆ ಸುರಿದ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ನದಿಗಳು, ಹಳ್ಳ ಕೊಳ್ಳಗಳಲ್ಲಿ ನೀರಿನ ಹರಿವೂ ಹೆಚ್ಚುತ್ತಿದೆ.

ಮಳೆಯ ಆರ್ಭಟಕ್ಕೆ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಮಳೆಗೆ ನೂರಾರು ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಪರಿಣಾಮ ಈ ರಸ್ತೆಯಲ್ಲಿ ಬೆಳಗ್ಗೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬೆಳಗ್ಗೆ ರಸ್ತೆ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ಭಾರೀ ಗಾಳಿ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೆಸ್ಕಾಂ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಬೆಳಗ್ಗೆ ವಿದ್ಯುತ್ ಕಂಬಗಳು, ತುಂಡಾಗಿ ರಸ್ತೆ ಮೇಲೆಯೇ ಬಿದ್ದಿದ್ದ ತಂತಿಗಳನ್ನು ತೆರವು ಮಾಡುತ್ತಿದ್ದ ದೃಶ್ಯಗಳು ರಸ್ತೆಯುದ್ದಕ್ಕೂ ಕಂಡುಬಂದವು. ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿದ್ದ ಪರಿಣಾಮ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ರವಿವಾರ ರಾತ್ರಿ ಹಾಗೂ ಸೋಮವಾರ ಇಡೀ ದಿನ ವಿದ್ಯುತ್ ಕಡಿತ ಉಂಟಾಗಿತ್ತು. 

ರವಿವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಮನೆಗಳಿಂದ ಹೊರಬರಲೂ ಸಾಧ್ಯವಾಗದಷ್ಟು ಮಳೆಯ ಆರ್ಭಟ ಇತ್ತು. ಸೋಮವಾರ ಬೆಳಗ್ಗೆ 10ರ ಬಳಿಕ ಮಳೆಯ ಮಲೆನಾಡಿನಲ್ಲಿ ಮಳೆ ಕ್ಷೀಣಗೊಂಡಿದ್ದು, ಸೋಮವಾರ ಸಂಜೆ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.

ಇನ್ನು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲುಬಾಗದ ಹೋಬಳಿಗಳ ವ್ಯಾಪ್ತಿಯಲ್ಲೂ ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾಗಿ ಜನಜೀವನಕ್ಕೆ ಕೊಂಚ ತೊಂದರೆಯಾಗಿತ್ತಾದರೂ ಮರಗಳು, ವಿದ್ಯುತ್‍ಕಂಬಗಳು ಉರುಳಿರುವ ಬಗ್ಗೆ ವರದಿಯಾಗಿಲ್ಲ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬಯಲು ಭಾಗದ ರೈತರು, ಸಾರ್ವಜನಿಕರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಈ ಮಳೆಯಿಂದಾಗಿ ಸಹಕಾರಿಯಾಗಲಿವೆ ಎಂದು ರೈತರು ಅಭಿಪ್ರಾಯಿಸಿದ್ದಾರೆ. ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಬಯಲು ಭಾಗದಲ್ಲಿ ಸದ್ಯ ಸುರಿದ ಮಳೆಯಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿರುವುದೂ ರೈತರ ಹರ್ಷಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಮಳೆಯಿಂದಾಗಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆಯಾದರೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಮನ್ಸೂಚನೆ ಸಿಗುತ್ತಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯು ಸತತ ಅತಿವೃಷ್ಟಿಗೆ ಸಿಲುಕಿ ಜನಜೀವನ ಅಸ್ತವ್ಯಸ್ತಗೊಂಡಂತೆ ಈ ಬಾರಿಯ ಮಳೆಗಾಲದ ಮಳೆ ಅತಿವೃಷ್ಟಿ ಉಂಟು ಮಾಡಬಹುದೆಂಬ ಆತಂಕ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿರುವ ಅಬ್ಬಾಸ್ ಹಾಗೂ ಸುಣ್ಣದ ಗೂಡು ಎಂಬಲ್ಲಿ ಜಯಮ್ಮ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದ ಘಟನೆಗಳು ವರದಿಯಾಗಿದ್ದು, ಅಲ್ಲದೇ ಬಣಕಲ್ ಪಟ್ಟಣದಲ್ಲಿರುವ ಪೊಲೀಸ್ ಕ್ವಾಟ್ರಸ್‍ನ ಮೇಲ್ಛಾವಣಿಗೆ ಹಾಕಲಾಗಿದ್ದ ಶೀಟ್‍ಗಳು ರಾತ್ರಿ ಬೀಸಿದ ಭಾರೀ ಗಾಳಿಗೆ ಹಾರಿ ಹೋಗಿವೆ. ಮನೆಗಳ ಮೇಲೆ ಮರಗಳು ಉರುಳಿದ ಪರಿಣಾಮ ಎರಡೂ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆಂದು ತಿಳಿದುಬಂದಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಚಕ್ಕಮಕ್ಕಿ, ಮತ್ತಿಕಟ್ಟೆ ಗ್ರಾಮಗಳಲ್ಲೂ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ತಾಲೂಕಿನಲ್ಲಿ ಆರ್ಭಟಿಸಿದ ಮಳೆ ಗಾಳಿಗೆ ಚಟ್ನಹಳ್ಳಿ ಗ್ರಾಮದ ಚಿ.ವಿ.ಚಂದ್ರಶೇಖರ್ ನಿಡಗಟ್ಟದಲ್ಲಿರುವ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಬೆಳೆ ಸಂಪೂರ್ಣ ನಾಶವಾಗಿದೆ.

ಸುಮಾರು 4 ಎಕರೆ ಪ್ರದೇಶದಲ್ಲಿ ಪಪಾಯ ಬೆಳೆ ಬೆಳೆಯಲಾಗಿದ್ದು ಕೊಯ್ಲಿಗೆ ಬಂದಿತ್ತು. ಇತ್ತೀಚೆಗೆ ಬೀಸಿದ ಬಾರೀ ಪ್ರಮಾಣದ ಗಾಳಿಗೆ ಪಪಾಯ ಗಿಡಗಳು ತುಂಡಾಗಿ ಬಿದ್ದ ಪರಿಣಾಮ ಶೇ.75ರಷ್ಟು ಫಸಲು ನಾಶವಾಗಿದ್ದು ಅಂದಾಜು 8 ರಿಂದ 9 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News