ಮಂಗಳವಾರ ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರ ಆರಂಭ
ಬೆಂಗಳೂರು, ಮೇ 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕರಾರಸಾ)ದ ಸಾರಿಗೆಗಳ ಕಾರ್ಯಾಚರಣೆಯನ್ನು ಮೇ 19ರಿಂದ ಪುನರಾರಂಭಿಸಲಾತ್ತಿದ್ದು, ಮೊದಲಿಗೆ ಸುಮಾರು 1500 ಅನುಸೂಚಿಗಳನ್ನು(ಶೇ.25ರಷ್ಟು) ಕಾರ್ಯಾಚರಣೆ ಮಾಡಲಾಗುತ್ತದೆ. ಬಳಿಕ ಹಂತ-ಹಂತವಾಗಿ ಸಾರಿಗೆಗಳ ಸಂಖ್ಯೆಯನ್ನು ಹೆಚ್ಚಿಸಿ ಕಾರ್ಯಾಚರಣೆಗೊಳಿಸಲಾಗುವುದು ಎಂದು ಕರಾರಸಾ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆಗಳು ಕಾರ್ಯಾಚರಣೆ ಮಾಡುವಾಗ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಸ್ ಪ್ರಯಾಣ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಹಗಲು ವೇಳೆಯಲ್ಲಿ ಮಾತ್ರ ಅಂದರೆ ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆವರೆಗೆ ಸಾರಿಗೆಗಳು ಕಾರ್ಯಾಚರಿಸಲಿವೆ. ಗಮ್ಯ(ದೂರ) ಸ್ಥಳಗಳನ್ನು ಸಂಜೆ 7ಗಂಟೆಯೊಳಗೆ ತಲುಪುವಂತಿರಬೇಕು.
ಉದಾಹರಣೆಗೆ ಬೆಂಗಳೂರು-ಮೈಸೂರು, ಪ್ರಯಾಣದ ಅವಧಿ 3ಗಂಟೆ, ಬೆಂಗಳೂರಿನಿಂದ ಕಡೆಯ ಸಾರಿಗೆ ನಿರ್ಗಮಿಸುವ ಸಮಯ ಸಂಜೆ 4ಗಂಟೆ, ಬೆಂಗಳೂರು-ಮಂಗಳೂರು, ಪ್ರಯಾಣದ ಅವಧಿ ಏಳೂವರೆ ಗಂಟೆ, ಬೆಂಗಳೂರಿನಿಂದ ಕಡೆಯ ಸಾರಿಗೆ ನಿರ್ಗಮಿಸುವ ಸಮಯ ಬೆಳಗ್ಗೆ 11.30ಗಂಟೆಗೆ ಹೀಗೆ ದೂರವನ್ನು ಸಂಜೆ 7ಗಂಟೆಯೊಳಗೆ ತಲುಪುವಂತಿರಬೇಕು.
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಯಾವುದೇ ಬಸ್‍ಗಳ ಕಾರ್ಯಾಚರಣೆ ಇರುವುದಿಲ್ಲ. ಮುಖಕ್ಕೆ ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಮಾತ್ರ ಬಸ್‍ನಲ್ಲಿ ಪ್ರಯಾಣಿಸಲು ಅವಕಾಶವಿದೆ. ಪ್ರಯಾಣಿಕರು ಮುಖಕ್ಕೆ ಮಾಸ್ಕ್ ಧರಿಸದಿದ್ದರೆ ಬಸ್ ಒಳಗೆ ಅನುಮತಿಯಿಲ್ಲ.
ಬಸ್ ನಿಲ್ದಾಣ ಹಾಗೂ ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಒಂದು ಬಸ್ಸಿನಲ್ಲಿ ಗರಿಷ್ಠ 30 ಜನ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಬಸ್ ನಿಲ್ದಾಣಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದೊಳಗಿನ ಪ್ರಮುಖ ಸ್ಥಳಗಳಿಗೆ ಮಾತ್ರ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಪ್ರಸ್ತುತ, ಅಂತರ-ರಾಜ್ಯ ಸಾರಿಗೆಗಳ ಕಾರ್ಯಾಚರಣೆ ಇರುವುದಿಲ್ಲ. ಪ್ರಸ್ತುತ ಹವಾನಿಯಂತ್ರಿತ ಬಸ್‍ಗಳ ಕಾರ್ಯಾಚರಣೆ ಇರುವುದಿಲ್ಲ. ಪ್ರತಿ ರವಿವಾರದಂದು ಯಾವುದೇ ಬಸ್‍ಗಳ ಕಾರ್ಯಾಚರಣೆ ಇರುವುದಿಲ್ಲ. ಬಸ್ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಲಾಗುವುದು.
ಮುಂಗಡ ಆಸನಗಳನ್ನು www.ksrtc.in ವೆಬ್‍ಸೈಟ್ ಮುಖಾಂತರ ಕಾಯ್ದಿರಿಸಿಕೊಳ್ಳಬಹುದು. ಸಾರ್ವಜನಿಕ ಪ್ರಯಾಣಿಕರು ಆದಷ್ಟು ಕಡಿಮೆ ಪ್ರಮಾಣದ ಲಗ್ಗೇಜುಗಳನ್ನು ತರುವಂತೆ ಹಾಗೂ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬೇಕು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮಾರ್ಗ ಮಧ್ಯದಲ್ಲಿ ಊಟ/ಉಪಹಾರಕ್ಕಾಗಿ ನಿಲುಗಡೆ ಇರುವುದಿಲ್ಲ. ಹೀಗಾಗಿ, ಕುಡಿಯುವ ನೀರು ಮತ್ತು ಆಹಾರವನ್ನು ಪ್ರಯಾಣಿಕರೇ ತರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.