×
Ad

ವೈದ್ಯ ವಿದ್ಯಾರ್ಥಿಗಳ ಶಿಷ್ಯ ವೇತನ ಪರಿಷ್ಕರಿಸಿ ಸರಕಾರ ಆದೇಶ

Update: 2020-05-18 22:10 IST

ಬೆಂಗಳೂರು, ಮೇ 18: ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅದರ ಜತೆಗೆ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪರಿಷ್ಕರಣೆ ಪ್ರಸ್ತಾವಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ.

ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಸಂದರ್ಭದಲ್ಲಿ ವೈದ್ಯರುಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ ಪರಿಷ್ಕರಣೆ ಮಾಡಿರುವುದಕ್ಕೆ ವೈದ್ಯ ವೃಂದದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ಫೆಬ್ರವರಿ 26 ರಂದು ‘ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್’ ಸಂಘಟನೆ ಪ್ರತಿನಿಧಿಗಳ ನಿಯೋಗ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತ್ತು. ಮನವಿ ಸ್ವೀಕರಿಸಿದ್ದ ಸಚಿವ ಸುಧಾಕರ್, ಮೂರ್ನಾಲ್ಕು ತಿಂಗಳಲ್ಲಿ ಈ ಕುರಿತು ಖಚಿತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರು.

ಕೊರೋನ ಸೋಂಕಿತ ಮಾಧ್ಯಮ ಪ್ರತಿನಿಧಿಯೊಬ್ಬರ ಸಂಪರ್ಕದಿಂದ ಕ್ವಾರಂಟೈನ್‍ನಲ್ಲಿದ್ದ ಸಂದರ್ಭದಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ ಮತ್ತು ಇಲಾಖೆ ನಿರ್ದೇಶಕ ಡಾ. ಗಿರೀಶ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಶಿಷ್ಯ ವೇತನ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದ್ದರು. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು ಕ್ವಾರಂಟೈನ್ ಬಳಿಕ ಭೇಟಿ ಮಾಡಿ ಹಣಕಾಸು ಇಲಾಖೆಯ ಸಮ್ಮತಿ ದೊರಕಿಸುವಂತೆ ಮನವೊಲಿಸುವಲ್ಲಿ ಡಾ.ಸುಧಾಕರ್ ಯಶಸ್ವಿಯಾದರು.

ಪರಿಷ್ಕೃತಗೊಂಡಿರುವ ಶಿಷ್ಯವೇತನದ ಅನ್ವಯ ಗೃಹ ವೈದ್ಯರಿಗೆ 3 ಸಾವಿರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೊದಲ ವರ್ಷ- 45 ಸಾವಿರ, ಎರಡನೇ ವರ್ಷ- 50 ಸಾವಿರ, ಮೂರನೇ ವರ್ಷ- 55ಸಾವಿರ, ಸೂಪರ್ ಸ್ಪೆಷಾಲಿಟಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ- 55 ಸಾವಿರ, ಎರಡನೇ ವರ್ಷ- 60ಸಾವಿರ, ಮೂರನೇ ವರ್ಷ- 65 ಸಾವಿರ, ಸೀನಿಯರ್ ರೆಸಿಡೆಂಟ್ಸ್ (ಕಡ್ಡಾಯ ಸರ್ಕಾರಿ ಸೇವೆ)- 60 ಸಾವಿರ ಮತ್ತು ಫೆಲೋಶಿಪ್ ವಿದ್ಯಾರ್ಥಿಗಳಿಗೆ- 60 ಸಾವಿರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

ಕೋವಿಡ್ ವಿರುದ್ಧ ಸರಕಾರ ನಡೆಸಿರುವ ಹೋರಾಟದಲ್ಲಿ ವೈದ್ಯ ವಿದ್ಯಾರ್ಥಿಗಳ ಕೊಡುಗೆ ಮಹತ್ತರವಾಗಿದೆ. ಅಧಿಸೂಚಿತ ಕೋವಿಡ್ ಆಸ್ಪತ್ರೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಇದೇ ಸಂದರ್ಭದಲ್ಲಿ ಶಿಷ್ಯ ವೇತನ ಪರಿಷ್ಕರಿಸಿದರೆ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವಂತೆ ಅವರನ್ನು ಪ್ರೇರೇಪಿಸಿದಂತಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಆರ್ಥಿಕವಾಗಿ ಸಂಕಷ್ಟ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಸರ್ಕಾರ ನಮ್ಮ ಮನವಿ ಪುರಸ್ಕರಿಸಿ ಶೇಕಡಾ 40 ರಷ್ಟು ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಕಳೆದ ಐದು ವರ್ಷಗಳಿಂದ ಸತತ ಮನವಿ ಸಲ್ಲಿಸಿದ್ದರೂ ಪ್ರಯೋಜನಆಗಿರಲಿಲ್ಲ. ಮೂರು ತಿಂಗಳ ಹಿಂದಷ್ಟೇ ಸಚಿವ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ್ದೆವು. ಸಚಿವರು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಶಿಷ್ಯ ವೇತನ ಪರಿಷ್ಕರಿಸಿ ಪ್ರೋತ್ಸಾಹಿಸಿರುವುದಕ್ಕೆ ಧನ್ಯವಾದಗಳು.
-ಡಾ. ಎಲ್. ದಯಾನಂದ ಸಾಗರ್, ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News