×
Ad

ಪೊಲೀಸರಿಗೂ ಪಿಪಿಇ ಕಿಟ್: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ

Update: 2020-05-18 22:54 IST

ಬೆಂಗಳೂರು, ಮೇ 18: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಾಕ್‍ಡೌನ್ ಆರಂಭ ದಿನದಿಂದಲೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ತಮ್ಮ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಪಿಪಿಇ ಕಿಟ್‍ಗಳನ್ನು ಬಳಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಕೊರೋನ ವೈರಸ್ ಮಹಾಮಾರಿ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಬೇರೆ ಬೇರೆ ರಾಜ್ಯ, ಜಿಲ್ಲೆ, ಗ್ರಾಮಗಳಿಂದ ಬರುವ ಜನರನ್ನು ಕ್ವಾರಂಟೈನ್ ಮಾಡಿ ಇವರಿಂದ ಬೇರೆಯವರಿಗೆ ಸೋಂಕು ಹರಡಂತೆ ನೋಡಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆ ಜನರ ಸಂಪರ್ಕದಲ್ಲಿರುವುದರಿಂದ ಕೊರೋನ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. 

ಒಬ್ಬರಿಗೆ ಸೋಂಕು ತಗುಲಿದರೆ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಅವರನ್ನು ಸಂಪರ್ಕಸಿರುವ ಎಲ್ಲ ಜನರಿಗೂ ವ್ಯಾಪಿಸುತ್ತದೆ. ಹೀಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್-19 ಪರೀಕ್ಷೆಗೆ ಒಳಪಡಬೇಕು ಎಂದು ಅವರು ಪ್ರಕಟನೆಯಲ್ಲಿ  ಸೂಚಿಸಿದ್ದಾರೆ.

ಯಾವುದೇ ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟರೆ ಅವರಿಗೆ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆತ್ಮಸ್ಥೆರ್ಯ ತುಂಬಬೇಕು. ಇದರ ಜವಾಬ್ದಾರಿಯನ್ನು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ವಲಯ ಐಜಿಪಿಗಳು ನೋಡಿಕೊಳ್ಳಬೇಕೆಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News