ಮಂಡ್ಯ: ಒಂದೇ ದಿನ 71 ಮಂದಿಗೆ ಕೊರೋನ ಪಾಸಿಟಿವ್

Update: 2020-05-19 14:58 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಮೇ 19: ಜಿಲ್ಲೆಯಲ್ಲಿ ಮಂಗಳವಾರ ದಾಖಲೆಯ ಪ್ರಮಾಣದಲ್ಲಿ ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, 71 ಮಂದಿಯ ವರದಿ ಪಾಸಿಟಿವ್ ಬಂದಿದೆ.

ಇವರೆಲ್ಲ ಮುಂಬೈನಿಂದ ಬಂದವರಾಗಿದ್ದು, ಎಲ್ಲರನ್ನೂ ನೇರವಾಗಿ ಕ್ವಾರಂಟೈನ್‍ಗೆ ಒಳಪಡಿಸಿ ಅವರ ಕಫವನ್ನು ಪರೀಕ್ಷೆ ನಡೆಸಲಾಗಿತ್ತು. ಇವರೆಲ್ಲರೂ ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕಿಗೆ ಸೇರಿದವರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ 160ಕ್ಕೆ ಏರಿದ್ದು, ಇವರಲ್ಲಿ 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊರ ರಾಜ್ಯಗಳಿಂದ ಪ್ರಮುಖವಾಗಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಈಗಿರುವ 350 ಕೋವಿಡ್ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ.

ಭಯಬೀಳುವ ಅಗತ್ಯ ಇಲ್ಲ: ನಾರಾಯಣಗೌಡ
ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚುತ್ತಿರುವುದಕ್ಕೆ ಜನತೆ ಭಯಬೀಳುವ ಅಗತ್ಯವಿಲ್ಲ. ಏಕೆಂದರೆ ಸೋಂಕಿತರು ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿದ್ದವರು. ಇವರಿಂದ ಸೋಂಕು ಹರಡಲು ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಹೊರ ರಾಜ್ಯಗಳಿಂದ ಮಂಡ್ಯ ಜಿಲ್ಲೆಗೆ ಬರಲು 2 ಸಾವಿರಕ್ಕು ಹೆಚ್ಚು ಜನ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಈಗಾಗಲೇ ಸುಮಾರು 1,400 ಜನ ಜಿಲ್ಲೆಗೆ ಬಂದಿದ್ದಾರೆ. ಬಂದವರನ್ನೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗದ್ದು, ಅವರಿಂದ ಸ್ಥಳಿಯರಿಗೆ ಹರಡುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕೋವಿಡ್-19 ವಿಚಾರವಾಗಿ ಮಂಗಳವಾರ ಜಿಲ್ಲೆಯ ಅಧಿಕಾರಿಗಳ ಜೊತೆ ವಿಡೀಯೊ ಕಾನ್ಫರೆನ್ಸ್ ನಡೆಸಿ ಮಾಹಿತಿ ಪಡೆದುಕೊಂಡ ಸಚಿವರು, ಕ್ವಾರಂಟೈನ್ ಆಗಿರುವವರನ್ನು ಗುಣಮಟ್ಟದ ಊಟ ತಿಂಡಿ ನೀರಿ ಚೆನ್ನಾಗಿ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಕೋವಿಡ್-19 ಪತ್ತೆ ಹಚ್ಚಲು ಪ್ರತಿನಿತ್ಯ ಹೆಚ್ಚು ಪರೀಕ್ಷೆ ನಡೆಸಬೇಕು. ಪರೀಕ್ಷಾ ಸಾಧನ ಕೊರತೆ ಇದ್ದರೆ ತಕ್ಷಣ ತಿಳಿಸಬೇಕು. ಕ್ವಾರಂಟೈನ್‍ಗೆ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ತಿಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏನೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಸಚಿವ ನಾರಾಯಣಗೌಡರು ಬುಧವಾರ ಜಿಲ್ಲೆಯ ಶಾಸಕರು, ಸಂಸದರ ಜೊತೆ ಸಭೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News