×
Ad

ನಂಜನಗೂಡು: ಲಾಕ್‍ಡೌನ್ ನಡುವೆ ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಿದ ರೀಡ್ ಅಂಡ್ ಟೇಲರ್ ಕಂಪನಿ

Update: 2020-05-19 22:30 IST

ಮೈಸೂರು,ಮೇ.19: ಲಾಕ್ ಡೌನ್ ಹೆಸರಿನಲ್ಲಿ ಆರ್ಥಿಕ ಸಂಕಷ್ಟದ ನೆಪ ಒಡ್ಡಿ ನಂಜನಗೂಡು ತಾಲೂಕಿನ ತಾಂಡವಪುರದ ತಾಂಡ್ಯಾ ಕೈಗಾರಿಕ ಪ್ರದೇಶದಲ್ಲಿರುವ ಪ್ರತಿಷ್ಠಿತ ಆರ್‍ಟಿಐಎಲ್(ರೀಡ್ ಅಂಡ್ ಟೇಲರ್) ಬಟ್ಟೆ ಕಾರ್ಖಾನೆ ಬಾಗಿಲು ಮುಚ್ಚಲಾಗಿದ್ದು, ಈ ಕಂಪನಿಯಿಂದಲೇ ಬದುಕು ಕಂಡುಕೊಂಡಿದ್ದ 1,500ಕ್ಕೂ ಹೆಚ್ಚು ಮಂದಿಯ ಬದುಕು ಬೀದಿಗೆ ಬಿದ್ದಂತಾಗಿದೆ.

ಎಸ್.ಕುಮಾರ್ ಅವರು ಈ ಕಾರ್ಖಾನೆಯನ್ನು ಆರ್‍ಟಿಐಎಲ್‍ಗೆ ಮಾರಾಟ ಮಾಡಿದ್ದರು. ನಿತಿನ್ ಎಸ್.ಕಾಸ್ಲಿವಾಲ್ ಅವರು ಈ ಕಂಪನಿಯ ಮಾಲಕರಾಗಿದ್ದರು. ಕಳೆದ ಮೂರು ವರ್ಷಗಳ ಹಿಂದ ಸದರಿ ಕಂಪನಿಯನ್ನು ಮಾರಾಟ ಮಾಡಲು (4,500 ಕೋಟಿ ರೂ)ಗೆ ಮುಂದಾಗಿದ್ದರು. ಆದರೆ, ಯಾರೂ ಖರೀದಿಸಲು ಮುಂದೆ ಬಾರದ ಹಿನ್ನಲೆಯಲ್ಲಿ ಬಾಂಬೆಯ ಭರತ್ ಪಾಟೀಲ್ ಎಂಬುವವರು ಕಂಪನಿ ನಡೆಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯದ ಆದೇಶದಂತೆ ಎನ್‍ಸಿಎಲ್‍ಟಿ ಲಿಕ್ವಿಡೇಟರ್(ರವಿ ಶಂಕರ್ ದೇವರಕೊಂಡ) ನೇಮಕವಾಗಿದ್ದರು. ಕಳೆದ ಮೂರು ವರ್ಷಗಳಿಂದಲೂ ಕಂಪನಿ ನಡೆಯುತ್ತಿದ್ದರೂ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಲಿಲ್ಲ, ಹಾಗಾಗಿ ಕಂಪನಿ ಮುಚ್ಚುಂತೆ ಲಿಕ್ವಿಡೇಟರ್ ಆದೇಶ ನೀಡಿರುವ ನೋಟಿಸ್ ಅನ್ನು ಮೇ.14 ರಂದು ಕಂಪನಿಯ ಗೇಟ್ ಮುಂದೆ ಅಂಟಿಸಲಾಗಿದೆ.

ಮಾ.19 ರಂದು ಕಂಪನಿಯ ಆಡಳಿತಾಧಿಕಾರಿ ಅಜಯ್ ಅಗರ್‍ವಾಲ್ ಕೋವಿಡ್-19 ಇರುವುದರಿಂದ ಮಾ.31ರವರೆಗೆ ವೇತನ ಸಹಿತ ರಜೆ ಘೋಷಣೆ ಮಾಡಿದ್ದರು. ಬಳಿಕ ಲಾಕ್ ಡೌನ್ ಮುಂದುವರಿದ ಪರಿಣಾಮ ಮತ್ತೆ ರಜೆಯನ್ನು ಮುಂದೂಡಲಾಯಿತಾದರೂ ಎಲ್ಲಿಯವರೆಗೆ ಎಂಬ ಮಾಹಿತಿಯನ್ನು ನೀಡಿರಲಿಲ್ಲ ಎಂದು “ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿಯನ್” ಅಧ್ಯಕ್ಷ ಎಚ್.ಎಸ್.ಜಗದೀಶ್ 'ವಾರ್ತಾಭಾರತಿ'ಗೆ ತಿಳಿಸಿದರು.

ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನ ನೀಡಿರದ ಕಾರಣ ಎ.26 ರಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮೇ.14 ರಂದು ಬೆಳಗ್ಗೆ ಎರಡು ತಿಂಗಳ ವೇತನ ನೀಡಿ ದಿಢೀರನೆ ಅಂದು ಸಂಜೆ ಲಿಕ್ವಿಡೇಟರ್ ಕಳೆದ ಮೂರು ವರ್ಷಗಳಿಂದ ಸಹಕಾರ ನೀಡಿರುವ ನಿಮಗೆ ಧನ್ಯವಾದಗಳು, ಆರ್ಥಿಕ ತೊಂದರೆ ಕಾರಣ ಕಂಪನಿಯನ್ನು ವಿಸರ್ಜನೆ (ಡಿಸ್ಚಾರ್ಜ್) ಮಾಡುತ್ತಿರುವುದಾಗಿ ಹೇಳಿ ನೋಟಿಸ್ ಅಂಟಿಸಿದ್ದಾರೆ ಎಂದು ಹೇಳಿದರು.

ಈ ಸಂಬಂಧ ಮೇ.20 ರಂದು ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಚನ್ನಂಜೇಗೌಡ, ಕೇಶವಕುಮಾರ್, ಮಹದೇವಸ್ವಾಮಿ ಇ.ಪಿ., ಶಿವಪ್ಪ ಎಂ., ಸಿದ್ದರಾಜು ಬಿ. ಜಯರಾಂ, ಜಗದೀಶ್, ಕಾನೂನು ಸಲಹೆಗಾರ ಮುರಳೀಧರ್ ಪೇಶ್ವ  ಬೆಂಗಳೂರಿಗೆ ತೆರಳಿ ಕೈಗಾರಿಕೆ, ಕಾರ್ಮಿಕ ಸಚಿವ ಮತ್ತು ಕಾರ್ಮಿಕ ಇಲಾಖೆ ಆಯುಕ್ತರನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಕಳೆದ 20 ವರ್ಷಗಳ ಹಿಂದೆ ಎಸ್.ಕುಮಾರ್ ಹೆಸರಿನಲ್ಲಿ ಪ್ರಾರಂಭವಾದ ಬಟ್ಟೆ ಕಂಪನಿ(ಶೂಟಿಂಗ್ಸ್ ಮತ್ತು ಶರ್ಟಿಂಗ್ಸ್) ಕಾಲ ಕ್ರಮೇಣ ಆರ್‍ಟಿಐಎಲ್ (ರೀಡ್ ಅಂಡ್ ಟೇಲರ್) ಆಗಿ ಬದಲಾವಣೆ ಪಡೆಯಿತು. ನಂಜನಗೂಡು ತಾಲೂಕಿನಲ್ಲೇ ಅತೀ ಹೆಚ್ಚು ಮಂದಿ ಈ ಕಂಪನಿಯ ನೌಕರರಾಗಿದ್ದು, ಜೊತೆಗೆ ಬೇರೆ ಬೇರೆ ಊರು ಜಿಲ್ಲೆಗಳಿಂದಲೂ ಬಂದು ಈ ಕಂಪನಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್‍ಡೌನ್ ನೆಪ ಮಾಡಿಕೊಂಡು ಅವರೆಲ್ಲರ ಬದುಕನ್ನು ಕತ್ತಲೆಗೆ ದೂಡಿರುವ ಕಂಪನಿ ಕಾರ್ಮಿಕರು ಮತ್ತು ಅವರ ಕುಟುಂಬದವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ 22 ವರ್ಷದಿಂದ 850 ಖಾಯಂ ನೌಕರರು 750 ರೂ ವೇತನದಿಂದ ಕರ್ತವ್ಯ ನಿರ್ವಹಿಸಿದ್ದೇವೆ. 182 ಸ್ಟಾಫ್ ಸೇರಿದಂತೆ ಒಟ್ಟಾರೆ 1500 ಜನ ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿ ನೌಕರ ಮತ್ತು ಕಾರ್ಮಿಕರ ಮುಖಂಡ ಗೋವಿಂದಸ್ವಾಮಿ ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರ ವೇತನ ಪರಿಷ್ಕರಣೆಯಾಗಿಲ್ಲ. ಈ ಸಂಬಂಧ ಆಡಳಿತ ಮಂಡಳಿ 2019 ರಂದು ಒಂದು ತಿಂಗಳ ಕಾಲಾವಕಾಶ ಕೇಳಿತ್ತು. ಇದಕ್ಕೆ ಬದ್ದರಾಗದ ಆಡಳಿತ ಮಂಡಳಿ ವಿರುದ್ಧ ಕೆಲಸ ಸ್ಥಗಿತಗೊಳಿಸಿ 36 ದಿನ ಪ್ರತಿಭಟನೆ ನಡೆಸಿದ್ದೆವು. ನಂತರ ಆಡಳಿತ ಮಂಡಳಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಮೇಲೆ ಕೆಲಸ ನಿರ್ವಹಿಸುತ್ತಿದ್ದೆವು. ಆದರೆ ದಿಢೀರನೆ ಕಾನೂನು ಬಾಹಿರವಾಗಿ ಕಂಪನಿಯನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.

ನಮ್ಮ ಕಂಪನಿ ವ್ಯಾಪ್ತಿಗೆ ಒಳಪಡುವ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪರ ನಿಂತು ಕಂಪನಿಯ ಆಡಳಿತ ಮಂಡಳಿ ಮತ್ತು ಸಂಬಂಧ ಪಟ್ಟವರ ಜೊತೆ ಮಾತನಾಡಿ 1,500 ಕುಟುಂಬಳಗನ್ನು  ಉಳಿಸಬೇಕು. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಪರ ಧ್ವನಿ ಎತ್ತಬೇಕು.
-ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ,
ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿಯನ್

ಕಳೆದ 20 ವರ್ಷಗಳಿಂದ  ಅನ್ನ ನೀಡಿದ ಕಂಪನಿ ಲಾಕ್ ಡೌನ್ ಹೆಸರೇಳಿ ನಮ್ಮನ್ನೆಲ್ಲಾ ಬೀದಿಗೆ ತಳ್ಳಿದೆ. ಮೇ.14 ರಂದು ಡಿಸ್ಚಾರ್ಜ್(ವಿಸರ್ಜನೆ) ಮಾಡುವುದಾಗಿ ಅಂಟಿಸಿರುವ ಬೋರ್ಡ್ ನೋಡಿ ಆಘಾತವಾಗಿದೆ. ಕಂಪನಿ ನಂಬಿಕೊಂಡು 1500 ಕುಟುಂಬಗಳು ಬದುಕುತಿದ್ದು, ಅವರೆಲ್ಲರ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ಹೊರಬೇಕಿದೆ.
-ಎಂ.ಗುರುಮೂರ್ತಿ, ಕಂಪನಿ ನೌಕರ

Writer - -ನೇರಳೆ ಸತೀಶ್‍ ಕುಮಾರ್

contributor

Editor - -ನೇರಳೆ ಸತೀಶ್‍ ಕುಮಾರ್

contributor

Similar News