ಸಿಇಟಿ-2020 ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಅವಕಾಶ

Update: 2020-05-19 17:14 GMT

ಬೆಂಗಳೂರು, ಮೇ 19: ಈಗಾಗಲೆ ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿಯಂತೆ ಸಿಇಟಿ-2020 ಅನ್ನು ಜು.30 ಮತ್ತು 31ರಂದು ನಡೆಸಲಾಗುವುದು. ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ, ಅಭ್ಯರ್ಥಿಗಳಿಗೆ ಸಮೀಪವಿರುವ ಸ್ಥಳಗಳಲ್ಲೆ ಸಿಇಟಿ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡಲಾಗುತ್ತಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ನಿಟ್ಟಿನಲ್ಲಿ ಒಟ್ಟು 75 ಸ್ಥಳಗಳನ್ನು ಹೊಸದಾಗಿ ಪರೀಕ್ಷಾ ಕೇಂದ್ರಗಳನ್ನಾಗಿ ನಿಗದಿಪಡಿಸಲಾಗಿದೆ. ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಪರೀಕ್ಷಾ ಸ್ಥಳಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಹೊಸದಾಗಿ ಸೇರ್ಪಡೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದ ನಂತರ ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಈ ಮೊದಲೇ ನೀಡಿದ್ದ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಹಾಗೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆದ್ಯತೆಯ ಮೇರೆಗೆ ಮೂರು ಆಯ್ಕೆಗಳನ್ನು ನೀಡಬಹುದಾಗಿದೆ. ಅಭ್ಯರ್ಥಿಯು ನೀಡುವ ಆದ್ಯತೆ ಮತ್ತು ಪರೀಕ್ಷಾ ಕೇಂದ್ರದ ಲಭ್ಯತೆಯ ಆಧಾರದ ಮೇಲೆ ಪರೀಕ್ಷಾ ಕೇಂದ್ರವನ್ನು ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು.

ಈ ಹಿನ್ನೆಲೆಯಲ್ಲಿ ಸಿಇಟಿ-2020ಕ್ಕೆ ಪರೀಕ್ಷಾ ಕೇಂದ್ರಗಳ ಬದಲಾವಣೆ ಮಾಡಿಕೊಳ್ಳಲು ಮತ್ತು ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಮೇ 20ರಂದು ಸಂಜೆ 6 ರಿಂದ ಮೇ 22ರ ಸಂಜೆ 6ರವರೆಗೆ ಅವಕಾಶ ಕಲ್ಪಿಸಲಾಗುವುದು. ಅಭ್ಯರ್ಥಿಗಳು ತಾವು ಆನ್‍ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಅರ್ಹತೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಮಾರ್ಪಡಿಸಿಕೊಳ್ಳಬಹುದಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News