ಜ್ವರ, ಶೀತ, ಕೆಮ್ಮು ಇರುವವರಿಗೆ ಸಲೂನ್, ಪಾರ್ಲರ್ ಪ್ರವೇಶವಿಲ್ಲ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Update: 2020-05-20 12:11 GMT

ಬೆಂಗಳೂರು, ಮೇ 20: ಕೊರೋನ ಸೋಂಕು ಹರಡುವಿಕೆ ತಡೆಗಟ್ಟುವ ದೃಷ್ಟಿಯಿಂದ ಸಲೂನ್ ಮತ್ತು ಪಾರ್ಲರ್ ಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವ ವ್ಯಕ್ತಿಗಳಿಗೆ ಸಲೂನ್‍ಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ತಲೆಗೆ ಟೋಪಿ ಮತ್ತು ಏಪ್ರನ್ ಧರಿಸಬೇಕು. ಮಾಸ್ಕ್ ಇಲ್ಲದವರನ್ನು ಒಳಗೆ ಬಿಟ್ಟುಕೊಳ್ಳುವಂತಿಲ್ಲ. ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಗ್ರಾಹಕನಿಗೂ ಪ್ರತ್ಯೇಕವಾಗಿ ಬಳಸಿ ಎಸೆಯಬಹುದಾದ ಟವೆಲ್/ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಗ್ರಾಹಕನಿಗೆ ಬಳಕೆ ಮಾಡಿದ ಎಲ್ಲ ಸಾಧನಗಳನ್ನು ಕನಿಷ್ಠ 30 ನಿಮಿಷಗಳ ಕಾಲ ಲೈಸೋಲ್ ಬಳಸಿ ಸೋಂಕು ನಿವಾರಣೆ ಮಾಡಬೇಕು. ಒಂದು ಸಾಧನ ಬಳಕೆಯಲ್ಲಿದ್ದಾಗ ಇನ್ನೊಂದು ಸೆಟ್ ಅನ್ನು ಸೋಂಕು ನಿವಾರಣೆ ಮಾಡಲು ಇಡಬೇಕು. ಪ್ರತಿಯೊಬ್ಬರ ತಲೆಗೂದಲು ಕತ್ತರಿಸಿದ ಬಳಿಕ ಸಿಬ್ಬಂದಿ ತಮ್ಮ ಕೈಗಳನ್ನು ಕಡ್ಡಾಯವಾಗಿ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ.

ಹೆಚ್ಚಿನ ಗ್ರಾಹಕರಿದ್ದರೆ ಟೋಕನ್ ವ್ಯವಸ್ಥೆ ಮಾಡಬೇಕು. ಪ್ರತಿನಿತ್ಯ ಎರಡು ಬಾರಿ ನೆಲ ಮತ್ತು ಮೆಟ್ಟಿಲುಗಳನ್ನು ಸೋಡಿಯಂ ಹೈಪೋಕ್ಲೋರೈಟ್ ಮೂಲಕ ಸ್ವಚ್ಛ ಮಾಡಬೇಕು. ಕಡ್ಡಾಯವಾಗಿ ಸಲೂನ್‍ಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕೊರೋನ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರದೇಶ ದ್ವಾರದಲ್ಲಿ ಪೋಸ್ಟರ್ ಲಗತ್ತಿಸಬೇಕು ಎಂದು ಆರೋಗ್ಯ ಇಲಾಖೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News