×
Ad

ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ರಾಜ್ಯಾದ್ಯಂತ ಸೋಂಕು ಹೆಚ್ಚಳ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್

Update: 2020-05-20 21:50 IST

ಚಿಕ್ಕಮಗಳೂರು, ಮೇ 20: ಜಿಲ್ಲೆಯಲ್ಲಿ ಮಂಗಳವಾರ ಬೆಳಕಿಗೆ ಬಂದಿರುವ ಐವರು ಕೊರೋನ ಸೋಂಕಿತರಿಗೆ ನಗರದ ಕೋವಿಡ್-19 ಚಿಕಿತ್ಸಾ ಘಟಕದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದವರ ಪತ್ತೆಗೆ 7 ತಂಡಗಳು ಕಾರ್ಯಪ್ರವೃತ್ತವಾಗಿದೆ. ರಾಜ್ಯ ಸರಕಾರ ಹೊರ ರಾಜ್ಯಗಳು ಹಾಗೂ ಅಂತರ್ ಜಿಲ್ಲೆಗಳ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚುವಂತಾಗಿದೆ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಎಷ್ಟೇ ಹೆಚ್ಚಿದರೂ ಅದನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಮೂಡಿಗೆರೆ ಹಾಗೂ ತರೀಕೆರೆಯಲ್ಲಿ ತಲಾ ಒಂದೊಂದು ಕೊರೋನ ಸೋಂಕಿತರ ವರದಿಗಳು ಪಾಸಿಟಿವ್ ಆಗಿವೆ. ಸಂಜೆ ವೇಳೆ ನರಸಿಂಹರಾಜಪುರ ತಾಲೂಕಿಗೆ ಸೇರಿರುವು ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದ ಅವರು, ಐವರು ಸೋಂಕಿತರ ಪೈಕಿ ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೋಂಕು ಹೇಗೆ ಬಂದಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ವೈದ್ಯರು ಲಾಕ್‍ಡೌನ್ ಜಾರಿಯಾದ ಬಳಿಕ ಅಂತರ್ ಜಿಲ್ಲೆಗಳಿಗೆ ಹೋಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ದಿನಗಳಿಂದ ಈ ವೈದ್ಯರು ನೂರಾರು ಹೊರರೋಗಿಗಳು ಹಾಗೂ ಒಪಿಡಿ ರೋಗಿಗಳನ್ನು ತಪಾಸಣೆ ಮಾಡಿದ್ದಾರೆ. ವೈದ್ಯರೊಂದಿಗೆ ಸಂಪರ್ಕದಲ್ಲಿದ್ದ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆಸ್ಪತ್ರೆಯ ನರ್ಸ್‍ಗಳು, ಸಿಬ್ಬಂದಿ ಹಾಗೂ ವೈದ್ಯರ ಮನೆಯಲ್ಲಿ ಭೇಟಿಯಾದವರನ್ನು ಗುರುತಿಸಿ ಈಗಾಗಲೇ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ವೈದ್ಯರ ಪಾಸಿಟಿವ್ ವರದಿಯಲ್ಲಿ "ಎ" ಸೋಂಕಿನ ಲಕ್ಷಣಗಳು ಕಂಡುಬಂದಿರುವುದರಿಂದ ಇವರಿಂದ ಬೇರೆಯವರಿಗೆ ಸೋಂಕು ಹರಡಿರುವ ಸಾಧ್ಯತೆ ಕಡಿಮೆ ಇದೆ ಎಂದರು.

ತರೀಕೆರೆ ಕೋಡಿಕ್ಯಾಂಪ್‍ನ ನಿವಾಸಿಯಾಗಿರುವ ಗರ್ಭಿಣಿ ಮಹಿಳೆ ಮಹಾರಾಷ್ಟ್ರದಿಂದ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಮಹಿಳೆಯ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಹಿಳೆಯ ಪತಿ ಚಿಕ್ಕಮಗಳೂರು ನಗರಕ್ಕೂ ಬಂದು ಹೋಗಿರುವ ಮಾಹಿತಿ ಲಬ್ಯವಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಸದ್ಯ ಮಹಿಳೆಯ ಪ್ರಥರ್ಮ ಸಂಪರ್ಕದಲ್ಲಿದ್ದ 9 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 32 ಮಂದಿಯನ್ನು ಗುರುತಿಸಿ ಕ್ವಾರಂಟೈನ್‍ ನಲ್ಲಿರಿಸಲಾಗಿದೆ ಎಂದರು.

ನರಸಿಂಹರಾಜಪುರ ತಾಲೂಕಿನಲ್ಲಿ ಇಬ್ಬರು ಬಾಲಕರು ಹಾಗೂ ಓರ್ವ ಬಾಲಕಿಯಲ್ಲಿ ಕೊರೋನ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂವರು ಒಂದೇ ಕುಟುಂಬದ ಸದಸ್ಯರಾಗಿದ್ದು, ಇತ್ತೀಚೆಗೆ ಮುಂಬಯಿಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ 9 ಮಂದಿಯೊಂದಿಗೆ ನರಸಿಂಹರಾಜಪುರಕ್ಕೆ ಆಗಮಿಸಿದ್ದರು. 9 ಮಂದಿಯನ್ನೂ ಕೊಪ್ಪ ಪಟ್ಟಣ ಸಮೀಪದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮೂವರ ಗಂಟಲದ್ರವ, ರಕ್ತದ ಮಾದರಿಯನ್ನು ಮೇ 16ರಂದು ಹಾಸನಕ್ಕೆ ಪರೀಕ್ಷೆಗೆ ಕಳಿಸಲಾಗಿತ್ತು. ಮಂಗಳವಾರ ಪ್ರಯೋಗಾಲಯದ ವರದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿ ಎಂದ ಅವರು, ಈ ಮೂವರೊಂದಿಗೆ ಟಿಟಿ ವಾಹನನದಲ್ಲಿ ಆಗಮಿಸಿದ್ದ 6 ಮಂದಿಯಲ್ಲಿ ಸೋಂಕಿನ ಲಕ್ಷಣಗಳಿಲ್ಲವಾದರೂ ಗಂಟಲದ್ರವ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಶೀಘ್ರ ವರದಿ ಬರಲಿದೆ ಎಂದರು.

ಮೂಡಿಗೆರೆ ತಾಲೂಕಿನಲ್ಲಿ ವೈದ್ಯರು ವಾಸವಿದ್ದ ಮನೆ ಹಾಗೂ ತರೀಕೆರೆ ತಾಲೂಕಿನಲ್ಲಿ ಗರ್ಭಿಣಿ ಮಹಿಳೆ ವಾಸವಿದ್ದ ಮನೆಗಳ ವ್ಯಾಪ್ತಿಯಲ್ಲಿ 100 ಮೀ. ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಸೀಲ್‍ಡೌನ್ ಮಾಡಲಾಗಿದ್ದು, 1 ಕಿಮೀ ಪ್ರದೇಶ ವ್ಯಾಪ್ತಿಯನ್ನು ತುರ್ತು ನಿಗಾ ವಲಯವನ್ನಾಗಿಸಲಾಗಿದೆ. ಈ ವಲಯದಲ್ಲಿನ ಪ್ರತೀ ಮನೆಗಳ ಸದಸ್ಯರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಗೊಳಪಡಿಸಲಿದ್ದಾರೆಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 200 ಜನರು ಆಗಮಿಸಿದ್ದಾರೆ. ಬಂದವರೆಲ್ಲರಿಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿದ್ದೇವೆ. ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ. ಹೊರ ರಾಜ್ಯಗಳಿಂದ ಬಂದಿರುವ ಎಲ್ಲರನ್ನೂ ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡುಬಂದವರ ಗಂಟಲ ದ್ರವ, ರಕ್ತದ ಮಾದರಿಗಳನ್ನು ಲ್ಯಾಬ್‍ಗೆ ಕಳುಹಿಸಲಾಗುತ್ತಿದೆ. ಸರಕಾರ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಅವಕಾಶ ನೀಡದಿರಲು ತೀರ್ಮಾನಿಸಿರುವುದರಿಂದ ಸದ್ಯ ಅಲ್ಲಿಂದ ಜಿಲ್ಲೆಗೆ ಯಾರೂ ಬರುವುದಿಲ್ಲ. ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್‍ಡೌನ್ ನಿಯಮಾವಳಿಗಳಲ್ಲಿ ಯಾವುದೇ ಮಾರ್ಪಾಡು ಮಾಡಿಲ್ಲ. ಅಂತರ್ ಜಿಲ್ಲೆಗಳ ನಡುವಿನ ಬಸ್ ಸಂಚಾರ, ವಾಹನಗಳ ಸಂಚಾರ ಸರಕಾರದ ಆದೇಶದಂತೆ ನಡೆಯುತ್ತಿದೆ ಎಂದು ಡಿಸಿ ಇದೇ ವೇಳೆ ಹೇಳಿದರು.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ನೂರಾರು ಮಂದಿ ಜಿಲ್ಲೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸೋಂಕಿರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಚಿಕ್ಕಮಗಳೂರು ನಗರದಲ್ಲಿ ಕೊರೋನ ಸೋಂಕು ಪರೀಕ್ಷೆಯ ಪ್ರಯೋಗಾಲಯ ಆರಂಭಿಸಲು ಮೂಲಸೌಕರ್ಯಗಳಿಲ್ಲ. ಆದ್ದರಿಂದ ಹೊಸದಾಗಿಯೇ ಪ್ರಯೋಗಾಲಯವನ್ನು ನಿರ್ಮಿಸಬೇಕಿದೆ. ಹೊಸ ಪ್ರಯೋಗಾಲಯ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ ಅವರಿಗೆ ಚಿಕಿತ್ಸೆ ನೀಡಲು 9ಮಂದಿ ತಜ್ಞ ವೈದ್ಯರ ತಂಡವನ್ನೂ ಸಜ್ಜುಗೊಳಿಸಲಾಗಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

 ಜಿಲ್ಲೆಯಲ್ಲಿ ಐವರಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜನರು ಆತಂಕ ಪಡುವ ಆಗತ್ಯವಿಲ್ಲ. ಜನರು ಮನೆಗಳಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೋನ ಸೋಂಕು ನಿಯಂತ್ರಣ ಕೇವಲ ಅಧಿಕಾರಿಗಳ, ಆರೋಗ್ಯ ಕಾರ್ಯಕರ್ತರ ಜಜವಬ್ದಾರಿಯಲ್ಲ. ಜನರ ಜವಬ್ದಾರಿಯೂ ಹೆಚ್ಚಿದೆ. ಬ್ಯಾಂಕ್ ಸೇರಿದಂತೆ ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ದೂರುಗಳು ಬಂದಿದ್ದು, ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವುದು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News